‘ಪ್ರಮೇಯ’ ಕಾದಂಬರಿ ಪರಿಚಯ – ವಿನಯ್‌ ಮಾಧವ

ಡಾ ಗಜಾನನ ಶರ್ಮ ಅವರ ಚೆನ್ನಭೈರಾದೇವಿ, ಚಾರಿತ್ರಿಕ ಕಾದಂಬರಿಗಳಷ್ಟೇ ಆಗದೆ, ಆಗಿನ ಜೀವನ ಚಿತ್ರ ಕೊಡುವಲ್ಲಿ ಯಶಸ್ವಿಯಾಗಿವೆ. ಡಾ ಗಜಾನನ ಶರ್ಮ ಅವರು ಬರೆದ ‘ಪ್ರಮೇಯ’ ಕಾದಂಬರಿ ಭಾರತದ ಮಹಾ ಮಾಪನದ ಒಂದು ಮಹತ್ವಪೂರ್ಣ ಘಟ್ಟವಾಗಿದೆ ಎನ್ನುತ್ತಾರೆ ಪತ್ರಕರ್ತ, ವಿಮರ್ಶನಾಕಾರ ಮಾಕೋನಹಳ್ಳಿ ವಿನಯ್‌ ಮಾಧವ ಅವರು, ತಪ್ಪದೆ ಮುಂದೆ ಓದಿ…

ಪುಸ್ತಕ : ಪ್ರಮೇಯ
ಲೇಖಕರು : ಗಜಾನನ ಶರ್ಮ
ಪ್ರಕಾಶಕರು: ಅಂಕಿತ ಪುಸ್ತಕ
ಬೆಲೆ : 336
ಖರೀದಿಸಲು : 080 – 2661 7100 / 2661 7755

ಆಳಿದವರ ಕಥೆ ಬರೆದಷ್ಟು ಸುಲಭವಾಗಿ ʻಉಳಿದವರ ಕಥೆʼ ಬರೆಯುವುದು ಸಾಧ್ಯವಿಲ್ಲ

ಸಮಕಾಲೀನ ಕಥೆ, ಕಾದಂಬರಿ ಬರೆಯುವುದಕ್ಕೂ, ಕಾಲಘಟ್ಟಗಳ ಒಳ ಹೊಕ್ಕು ಕಥೆಗಳನ್ನು ಹೊರ ತರುವುದಕ್ಕೂ ಬಹಳ ವ್ಯತ್ಯಾಸವಿದೆ. ಕಾಲಘಟ್ಟಗಳ ಒಳಕ್ಕೆ ಹೋಗಲು ನಾವು ಬಹಳಷ್ಟು ಕಸರತ್ತು ಮಾಡಬೇಕಾಗುತ್ತದೆ. ಮೊದಲನೆಯದಾಗಿ, ನಾವು ಹೋಗುತ್ತಿರುವ ಕಾಲಘಟ್ಟದ ಚರಿತ್ರೆ, ಜೀವನ ಶೈಲಿ ಮತ್ತು ಬೌಗೋಳಿಕ ವಿನ್ಯಾಸದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಕಳೆದ ಐವತ್ತು-ನೂರು ವರ್ಷಗಳಲ್ಲಿ ಮನುಷ್ಯರು ಮಾಡಿರುವ ಭೌಗೋಳಿಕ ಬದಲಾವಣೆ, ಹಿಂದೆ ಮಿಲಿಯನ್‌ ವರ್ಷಗಳವರೆಗೆ ಆಗಿರಲಿಲ್ಲ. ಏಕೆಂದರೆ, ಆ ಬದಲಾವಣೆ ಒಂದು ನೈಸರ್ಗಿಕ ಕ್ರಿಯೆಯಾಗಿತ್ತು. ಈಗಿನದು ಮಾನವನ ಪ್ರವೇಶದಿಂದ ಆದದ್ದು.

ಭೂಮಿಯ ಬೌಗೋಳಿಕ ಬದಲಾವಣೆಗಾಗಿ ಹಲವಾರು ಯಂತ್ರಗಳನ್ನು ಕಂಡು ಹಿಡಿದಿದ್ದಾರೆ. ಮೊದಲೆಲ್ಲ ಮನುಷ್ಯರು ಒಟ್ಟಾಗಿ ಸೇರಿ ಒಂದು ವರ್ಷದಲ್ಲಿ ಅಗೆಯುತ್ತಿದ್ದಷ್ಟು ಮಣ್ಣನ್ನು ಈ ಯಂತ್ರಗಳು ಕೆಲವೇ ಘಂಟೆಗಳಲ್ಲಿ ಅಗೆದು. ಗುಡ್ಡಗಳನ್ನು ಮಟ್ಟ ಮಾಡಿಬಿಡುತ್ತವೆ. ಕೆಲವು ಜಾಗಗಳನ್ನು ಅಥವಾ ಕೆಲವು ಗಿಡ ಮರಗಳನ್ನು ನಾಶ ಮಾಡಬಾರದು ಎನ್ನುವು ವಿವೇಚನೆ ಈ ಯಂತ್ರಗಳಿಗೆ ಇರೋದಿಲ್ಲ. ಆ ಯಂತ್ರಗಳನ್ನು ಚಲಾಯಿಸುವವರಿಗೂ ಅಷ್ಟೆ. ಇದು ಮನುಷ್ಯ ಕಂಡ ಅಭಿವೃದ್ದಿಯಲ್ಲಿ ಅಡಕವಾಗಿರುವ ದುರಂತಗಳಲ್ಲಿ ಒಂದು.

ಇನ್ನು ಚರಿತ್ರೆ ಮತ್ತು ಜೀವನ ಶೈಲಿ ಅರ್ಥ ಮಾಡಿಕೊಳ್ಳುವುದು ದೊಡ್ಡ ಸಾಹಸವೇ ಸರಿ. ಚರಿತ್ರೆಯನ್ನು ಓದಿದಾಗ, ಅದನ್ನು ಆ ಕಾಲಘಟ್ಟದ ಸಮಕಾಲೀನರು ದಾಖಲಿಸಿರುತ್ತಾರೆ. ಅದರಲ್ಲಿ ಆಳುವವರ ಕಥೆಗಳು ಇರುತ್ತವೆ ಹೊರತು, ಸಾಮಾನ್ಯರದಲ್ಲ. ಹಾಗಾಗಿ ನಮ್ಮ ಕಥೆಗಳು ಸಾಧಾರಣವಾಗಿ ಆರಂಭವಾಗುತ್ತಿದ್ದದ್ದು, ಒಂದೂರಲ್ಲಿ ಒಬ್ಬ ರಾಜನಿದ್ದ ಅಂತಲೋ, ಒಬ್ಬ ಶ್ರೀಮಂತ ವರ್ತಕ ಇದ್ದ ಅಂತ. ಇವುಗಳಿಗೆ ಅಪವಾದ ಎಂದರೆ ಪಂಚ ತಂತ್ರ, ಈಸೋಪನ ನೀತಿ ಕಥೆಗಳು, ಅರೆಬಿಯನ್‌ ನೈಟ್ಸ್‌ ಮುಂತಾದವು. ಅವುಗಳನ್ನು ಇಂದಿನ ಪೀಳಿಗೆ ಓದುತ್ತಿದೆಯೋ, ಇಲ್ಲವೋ ಗೊತ್ತಿಲ್ಲ.

ಆಳುವವರ ಕಥೆಗಳೂ ಅಷ್ಟೆ. ರಾಜರುಗಳನ್ನು ಹೊಗಳಿ, ವೈಭವೀಕರಿಸಿ ಬರೆದಿರುತ್ತಾರೆ. ಪ್ರಜೆಗಳೆಲ್ಲರೂ ಸಂತೋಷದಿಂದ ಇದ್ದರು ಎಂದೂ ಬರೆದಿರುತ್ತಾರೆ. ಇವುಗಳನ್ನು ಕಲ್ಲಿನಲ್ಲಿ, ತಾಮ್ರದ ತಗಡಿನಲ್ಲಿ ಮತ್ತು ಓಲೆ ಗರಿಗಳಲ್ಲಿ ಬರೆದಿರುತ್ತಾರೆ. ಚರಿತ್ರಾಕಾರು ಇವುಗಳನ್ನು ಮಾತ್ರ ನಂಬುತ್ತಾರೆ. ಆದರೆ, ಕಥೆಗಾರನಿಗೆ ಬೇಕಾಗಿದ್ದು ಇನ್ನೂ ಹೆಚ್ಚಿರುತ್ತದೆ. ಅವುಗಳನ್ನು ಜನಪದಗಳಲ್ಲಿ ಹುಡುಕುತ್ತಾರೆ. ಜನಪದಗಳನ್ನು ಚರಿತ್ರಾಕಾರರು ಎಂದೂ ನಂಬುವುದಿಲ್ಲ.
ಇಷ್ಟೆಲ್ಲಾ ಕಸರತ್ತು ಮಾಡುವ ಹೊತ್ತಿಗೆ ಕಥೆಗಾರ ಹೈರಾಣಾಗಿ ಹೋಗಿರುತ್ತಾನೆ.

 

ನನ್ನ ಕುಟುಂಬದ ಕಥೆಯಾದ ʻಸಿಕೆಜಿ ಸ್ಪೋರ್ಟ್ಸ್‌ ಕ್ಲಬ್‌, ಮಾಕೋನಹಳ್ಳಿʼ ಬರೆಯುವ ಹೊತ್ತಿಗೆ ನನಗೆ ಈ ಅನುಭವವಾಗಿತ್ತು. ನಾಲ್ಕುನೂರು ವರ್ಷಗಳ ಕೆಳಗೆ ನಮ್ಮೂರಿನ ಕಾಡುಗಳನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ, ಕೇವಲ ಮೂವತ್ತು ವರ್ಷಗಳ ಹಿಂದೆ ನಾನು ನೋಡಿದ ಕಾಡುಗಳು ಈಗಿಲ್ಲ.

ನಮಗೆ ಕೆಲವು ದಶಕಗಳರ್ಗ ಹಿಂದಿನ ಜೀವನ ಶೈಲಿ ಮತ್ತು ಸಾಮಾಜಿಕ, ಬೌಗೋಳಿಕ ವಿಶ್ಲೇಷಣೆಗಳನ್ನು ಕಾರಂತರು ಮತ್ತು ಕುವೆಂಪು ಅವರ ಬರವಣಿಗೆಗಳಲ್ಲಿ ಕಾಣಬಹುದು. ಆದರೆ, ಅದಕ್ಕೂ ಮುಂಚಿನ ಚಾರಿತ್ರಿಕ ದಿನಗಳ ಜೀವನ ಶೈಲಿ ಮತ್ತು ಬೌಗೋಳಿಕ ವಿನ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಮಾಸ್ತಿ, ತರಾಸು ಅವರ ಹದಿಮೂರು ಕಾದಂಬರಿಗಳು, ಶ್ರೀನಿವಾಸ ಅವರ ಕಾಕನಕೋಟೆಯಂತಹ ಕಾದಂಬರಿಗಳನ್ನು ಓದಿ, ಆಗಿನ ಜೀವನ ಹೀಗಿದ್ದಿರಬಹುದು ಎಂದು ಗ್ರಹಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಬಂದ ವಸುದೇಂದ್ರ ಅವರ ತೇಜೋ ತುಂಗಭದ್ರ, ಡಾ ಗಜಾನನ ಶರ್ಮ ಅವರ ಚೆನ್ನಭೈರಾದೇವಿ, ಚಾರಿತ್ರಿಕ ಕಾದಂಬರಿಗಳಷ್ಟೇ ಆಗದೆ, ಆಗಿನ ಜೀವನ ಚಿತ್ರ ಕೊಡುವಲ್ಲಿ ಯಶಸ್ವಿಯಾಗಿವೆ ಎಂದು ನನಗನ್ನಿಸಿತು.

ಆದರೆ, ಚಾರಿತ್ರಿಕ ಮತ್ತು ಆಧುನಿಕ ಯುಗದ ಮಧ್ಯೆ ಬರುವ ಕಾಲಘಟ್ಟದ ಕಾದಂಬರಿ ಬರೆಯುವುದು ಹೇಗೆ ಎನ್ನುವುದನ್ನು ನಾನಂತೂ ಯೋಚಿಸಿರಲಿಲ್ಲ. ಡಾ ಗಜಾನನ ಶರ್ಮ ಅವರು ಬರೆದ ಪ್ರಮೇಯ ಕಾದಂಬರಿ ಓದುವವರೆಗೆ. ಈ ಕಾದಂಬರಿಯು ಭಾರತದ ಮಹಾ ಮಾಪನದ ಒಂದು ಮಹತ್ವಪೂರ್ಣ ಘಟ್ಟ. ಬ್ರಿಟಿಷ್‌ ಆಡಳಿತದಲ್ಲಿ ಸುಮಾರು ಏಳು ದಶಕಗಳ ನಡೆದ ಒಂದು ಸರ್ವೆ ಅಥವಾ ಮಹಾಮೋಜುಣಿ. ಇದು ಒಬ್ಬ ಸಾಮಾನ್ಯ ಮನುಷ್ಯನ ದೃಷ್ಟಿಯಲ್ಲಿ ಮಹಾ ಬೋರು ಎನ್ನಿಸುವಂತಹ ಕ್ರಿಯೆ. ನಮ್ಮ ಸೈಟು ಅಥವಾ ಕೃಷಿ ಭೂಮಿಯನ್ನು ಸರ್ವೆ ಮಾಡಲು ಕಂದಾಯ ಇಲಾಖೆಯವರು ಬಂದಾಗ, ಅವರು ಚೈನ್‌ ಎಳೆಯುವಾಗ, ನಾವು ತಲೆಕೆರೆದುಕೊಂಡು ನಿಂತು ನೋಡುವ ಒಂದು ಪ್ರಕ್ರಿಯೆ.

ಆದರೆ, ಭಾರತದ ಉದ್ದ-ಅಗಲಗಳೆಷ್ಟು ಮತ್ತು ಅವುಗಳ ಬೌಗೋಳಿಕ ವಿನ್ಯಾಸ ಹೇಗಿದೆ ಎನ್ನುವುದನ್ನು ಮೊದಲ ಸಲ ಇದೇ ಸರ್ವೇ ಮೂಲಕ ಪತ್ತೆ ಹಚ್ಚಿ, ಅದಕ್ಕೊಂದು ಆಕಾರ ಕೊಡುವ ಪ್ರಕ್ರಿಯೆ ಅಮೋಘವಾದದ್ದು.

ಆದರೆ, ಇದರಿಂದ ಯಾರಿಗೆ ಲಾಭ? ಇಂತಹ ನೀರಸ ಕೆಲಸಕ್ಕೆ ಉತ್ಸಾಹ ತೋರಿದವರು ಯಾರು? ಈ ಕಾಲಘಟ್ಟದಲ್ಲಿ ಎಷ್ಟು ಜನರು ಈ ಯಾನದಲ್ಲಿ ಪಾಲ್ಗೊಂಡಿದ್ದರು? ಯಾರು ಯಾವ ಕಾಲಘಟ್ಟಗಳಲ್ಲಿ ಕೆಲಸ ಮಾಡಿದರು? ಬ್ರಿಟಿಷ್‌ ಸರ್ಕಾರ ಈ ಮೋಜುಣಿಯನ್ನು ತಮ್ಮ ಆಡಳಿತಾತ್ಮಕ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾ, ತಮ್ಮ ಜ್ಞಾನದ ಬಗ್ಗೆ ಮೇಲರಿಮೆ ಬೆಳಸಿಕೊಳ್ಳಲು ಪ್ರಯತ್ನಿಸಿದರೂ, ಮೋಜುಣಿಯನ್ನು ವೈಜ್ಞಾನಿಕವಾಗಿ ನಡೆಸಿಕೊಂಡು ಹೋದ ಅಧಿಕಾರಿಗಳು ತಮ್ಮ ಗುರಿ ಮುಟ್ಟಲು ಪಡಬಾರದ ಪಾಡು ಪಡುತ್ತಿದ್ದರು.

ಮೆಕೆಂಜಿ ಆರಂಭಿಸಿದ ಕ್ಯಡಸ್ಟ್ರಲ್‌ ಮತ್ತು ಟೋಪೋ ಸರ್ವೆಯಿಂದ ಆರಂಭವಾಗಬೇಕಿದ್ದ ಈ ಕೆಲಸವನ್ನು, ಅದೇ ಸಮಯದಲ್ಲಿ ವಿಲಿಯಮ್‌ ಲ್ಯಾಂಬ್ಟನ್‌ ಈಸ್ಟ್‌ ಇಂಡಿಯಾ ಕಂಪನಿಯ ಮಂಡಳಿಯನ್ನು ಒಪ್ಪಿಸಿ, ಟ್ರಿಗ್ನಾಮೆಟ್ರಿಕ್‌ ಸರ್ವೆಗೆ ಬದಲಿಸಿದ. ಇದನ್ನು ಮುಂದೆ ಗಟಿಎಸ್‌ ಎಂದು ಕರೆಯಲಾಯಿತು. ಬಹಳ ಆಶ್ಚರ್ಯವಾದ ಸಂಗತಿ ಎಂದರೆ, ಮೊದಲನೇ ಸರ್ವೆ ನಡೆದದ್ದು ಬೆಂಗಳೂರಿನ ಲಿಂಗರಾಜಪುರದಿಂದ ಆಗರದವರೆಗೆ.

ಈ ಕಾದಂಬರಿಯಲ್ಲಿ, ಮೆಕೆಂಜೆ, ಜಾರ್ಜ್‌ ಎವೆರೆಸ್ಟ್‌ ನಿಂದ ಹಿಡಿದು, ಜಾರ್ಜ್‌ ಮಾಂಟ್ಗೊಮರಿಯವರೆಗೆ ಬಹಳಷ್ಟು ಬ್ರಿಟಿಷ್‌ ಅಧಿಕಾರಿಗಳಿದ್ದಾರೆ. ಅವರಷ್ಟೇ ಪ್ರತಿಭಾನ್ವಿತ, ಭಾರತೀಯನಾದ ರಾಮನಾಥ ಸಿಕ್ದರ್‌ ಇದ್ದಾರೆ. ಮೆಕೆಂಜೆ ತನ್ನ ಟೋಪೋ ಸರ್ವೆ ಜೊತೆಯಲ್ಲಿ, ಪುರಾತನತತ್ವದ ಸಂಶೋಧಕನಾಗಿಯೂ ಕಾಣುತ್ತಾನೆ. ಗತ್ತಿನ ಎವರೆಸ್ಟ್‌ ಮುಂದೆ, ಅತೀ ಮಾನವೀಯವಾಗಿ ಮಾಂಟ್ಗೊಮರಿ ಕಾಣುತ್ತಾನೆ. ಹೋದ ಕಡೆಯಲ್ಲ ಸ್ಥಳೀಯರನ್ನು ಗೌರವದಿಂದ ಕಾಣುತ್ತಾನೆ. ಹಿಮಾಲಯದ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧವನ್ನೂ ಬೆಳಸುತ್ತಾನೆ.

ಕಾದಂಬರಿ ಓದುತ್ತಾ ಹೋದಂತೆ, ಐವತ್ತು ಕಿಲೋ ತೂಕದ ಥೀಯೋಡೋ ಲೈಟ್‌ ಭಾರ ನಮ್ಮ ಹೆಗಲಿನ ಮೇಲೆ ಬಿದ್ದಂತೆ ಭಾಸವಾಗುತ್ತದೆ. ರಾತ್ರಿ ಹೊತ್ತು ನಕ್ಷತ್ರಗಳ ಚಲನೆಯನ್ನು ಗಮನಿಸುವ ಖಗೋಲ ತಜ್ಞನಂತೆ ಭಾವುಕರಾಗುತ್ತೇವೆ. ಕಾಡಿನಲ್ಲಿ ಹುಲಿ ಅಟ್ಟಿಸಿಕೊಂಡು ಬಂದಂತೆ, ಹಿಮಾಲಯದ ಕುರ್ಗಾಳಿಗೆ ಬೆರಳುಗಳು ಮರಗಟ್ಟಿದಂತೆ ಮತ್ತು ಮಂಡಿ ಹಿಡಿದುಕೊಂಡಂತೆ ಭಾಸವಾಗುತ್ತದೆ. ನೈನ್‌ ಸಿಂಗ್‌ ಜೊತೆ ಟಿಬೆಟ್‌ ಪ್ರವೇಶ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದಂತೆ ಅನ್ನಿಸುತ್ತದೆ. ಹೀಗೆಯೇ, ಒಂದೊಂದೂ ಪಾತ್ರಗಳಲ್ಲಿ ಲೀನವಾಗಿ, ಒಂದು ಅದ್ಭುತವಾದ ಯಾನ ಮುಗಿಸಿದಂತೆ ಭಾಸವಾಗುತ್ತದೆ.

ಈ ಕಾದಂಬರಿ ಬರೆಯಲು ಡಾ ಶರ್ಮ ಅವರಿಗೆ ಎರಡು ವಿಷಯಗಳು ಸಹಕಾರಿಯಾಗಿದ್ದವು ಎಂದು ನನಗನ್ನಿಸಿತು. ಅವರ ಇಂಜೀನಿಯರಿಂಗ್‌ ಹಿನ್ನೆಲೆ ಮತ್ತು ಅವರು ಕೆಲಸ ಮಾಡಿದ ಕರ್ನಾಟಕ ವಿದ್ಯುತ್‌ ಪ್ರಸಾರನ ನಿಗಮದ ಅನುಭವಗಳು. ಅವುಗಳು ಅವರಿಗೆ ಸೀಮಿತವಾಗಿ ಸಹಕಾರಿಯಾಗಿದೆ ಅಷ್ಟೆ. ಈ ಸರ್ವೆ ಎನ್ನುವ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವಷ್ಟು. ಇನ್ನುಳಿದ ವಿವರಗಳಿಗೆ ಅವರು ಮಾಡಬೇಕಾದ ಕೆಲಸ ಬಹಳಷ್ಟು ಎಂದು ಪುಸ್ತಕ ಓದಿದ ಮೇಲೆ ನನಗೆ ಅನ್ನಿಸಿತು.

ಸರ್ವೆಯಂತಹ ನೀರಸ ಕೆಲಸದ ಬಗ್ಗೆ ಇಷ್ಟೊಂದು ಸ್ವಾರಸ್ಯಕರವಾದ ಕಾದಂಬರಿಯಾಗಿ ಬರೆಯಬಹುದು ಎನ್ನುವುದನ್ನು ನಾನು ಕನಸಿನಲ್ಲೂ ಭಾವಿಸಿರಲಿಲ್ಲ. ಇಂತಹ ಪುಸ್ತಕ ಕನ್ನಡದಲ್ಲಂತೂ ನಾನು ಕೇಳಿಲ್ಲ. ಇಡೀ ಪುಸ್ತಕವು ಒಂದು ಅದ್ಭುತ ಸಾಹಸಮಯ ಯಾನದಂತೆ ಭಾಸವಾದರೆ, ಪುಸ್ತಕ ಓದಿ ಮುಗಿಸುವ ಹೊತ್ತಿಗೆ ನಮ್ಮ ವೈಜ್ಞಾನಿಕ ಜ್ಞಾನ ಒಂದು ಮಜಲು ಹೆಚ್ಚಾಗಿರುತ್ತದೆ ಎಂದು ನನ್ನ ಅಭಿಪ್ರಾಯ….


  • ಮಾಕೋನಹಳ್ಳಿ ವಿನಯ್‌ ಮಾಧವ – ಪತ್ರಕರ್ತರು,ಲೇಖಕರು, ವಿಮರ್ಶಕರು, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW