ಜನವರಿ 23, 2023 ರಂದು ಭಾರತದ ಸ್ವಾತಂತ್ರ್ಯ ಚಳುವಳಿಯ ರಾಜರಹಿತ ಪಂಥದ ಮಹಾನ್ ನಾಯಕ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವ ಪೂರ್ಣವಾಗುತ್ತಿರುವ ಸಂದರ್ಭದಲ್ಲಿ, ಬ್ರಿಟಿಷ್ ಆಡಳಿತದಿಂದ ತಾಯ್ನಾಡನ್ನು ಮುಕ್ತಗೊಳಿಸಲು ಅವರು ಮಾಡಿದ ಹೋರಾಟ, ಅವರ ಧೈರ್ಯ ಹಾಗೂ ಬದ್ಧತೆಯನ್ನು ನಾವು ಹೆಮ್ಮೆ ಮತ್ತು ಗೌರವದಿಂದ ಸ್ಮರಿಸುತ್ತೇವೆ.
ಈ ಮಹಾನ್ ವ್ಯಕ್ತಿತ್ವದ ಹೆಸರಿನಲ್ಲಿ, ನಮ್ಮ ದೇಶದ ಜನರ ಮೇಲೆ ಆಗುತ್ತಿರುವ ಎಲ್ಲಾ ರೀತಿಯ ಅನ್ಯಾಯ, ದಮನ, ಶೋಷಣೆ ಹಾಗೂ ತಾರತಮ್ಯದ ವಿರುದ್ಧ ರಾಜರಹಿತ ಹೋರಾಟದ ಪರಂಪರೆಯನ್ನು ಮುಂದುವರಿಸಲು ನಾವು ಪಣ ತೊಡುತ್ತೇವೆ.
ನಮ್ಮ ದೇಶದಲ್ಲಿ ಸಾಮಾಜಿಕ ತಾರತಮ್ಯ ಹೆಚ್ಚಾಗುತ್ತಿರುವುದನ್ನು, ಎಲ್ಲರಿಗೂ ಶಿಕ್ಷಣ ಎಂಬ ಗುರಿ ಸಾಧನೆಯಾಗುವ ಬದಲು ಕುಂಠಿತವಾಗಿರುವುದನ್ನು, ವೈಜ್ಞಾನಿಕ ಮನೋಭಾವದ ಧಾಳಿಯಾಗುತ್ತಿರುವುದನ್ನು, ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚಾಗುತ್ತಿರುವುದನ್ನು ಶ್ರಮವಹಿಸಿ ಗಳಿಸಿದ ಪ್ರಜಾತಾಂತ್ರಿಕ ಹಕ್ಕುಗಳು ಪಲ್ಲಟಗೊಳ್ಳುತ್ತಿರುವುದನ್ನು, ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ಬೇರ್ಪಡಿಸಲು ಅತ್ಯಂತ ಹೀನಾಯ ಪ್ರಯತ್ನಗಳಾಗುತ್ತಿರುವುದನ್ನು ನಾವು ಅತ್ಯಂತ ಆತಂಕದಿಂದ ಗಮನಿಸುತ್ತಿದ್ದೇವೆ. ಈ ಎಲ್ಲಾ ಅನ್ಯಾಯಗಳಿಂದ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹಾಗೂ ಇತರ ಹುತಾತ್ಮರು ಮತ್ತು ಸ್ವಾತಂತ್ರ ಯೋದ್ಧರ ಕನಸುಗಳು ಛಿದ್ರಛಿದ್ರವಾಗುತ್ತಿವೆ. ನಾವು ಅವರ ಈ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸುವ ಪಣವನ್ನು ತೊಡುತ್ತೇವೆ.
ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಚಳುವಳಿಯ ಈ ಮಹಾನ್ ವ್ಯಕ್ತಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಮಯದಲ್ಲೇ ನಾವು ಕೋಮುವಾದ, ಧಾರ್ಮಿಕ ಮತಾಂಧತೆ, ಮೂಢನಂಬಿಕೆಗಳ ಸಾಮಾಜಿಕ ದುಷ್ಟಶಕ್ತಿಗಳ ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಿ, ಒಂದು ಸಮಸಮಾಜದ ನಿರ್ಮಾಣ ಮಾಡುವುದಕ್ಕಾಗಿ ಎಲ್ಲ ರೀತಿಯ ಶೋಷಣೆ ಮತ್ತು ಅನ್ಯಾಯಗಳನ್ನು ಕೊನೆಗಾಣಿಸಲು ದಮನಿತರ ಹಾಗೂ ಶೋಷಿತರ ಬೆಂಗಾವಲಾಗಿ ನಿಲ್ಲುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ.
- ಶೋಭಾ – ರಾಜ್ಯ ಕಾರ್ಯದರ್ಶಿಗಳು, AIMSS