ರಾಜಧಾನಿಯಲ್ಲಿ ಶ್ರೀಮತಿಯರು : ಕೆ. ಸತ್ಯನಾರಾಯಣಕನ್ನಡ ಕಾದಂಬರಿ ಪರಂಪರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ವಸ್ತುವಾಗಿರಿಸಿಕೊಂಡು ಕೆ.ಸತ್ಯನಾರಾಯಣ ಅವರು ಬರೆದ ಏಕೈಕ ಕೃತಿ ‘ರಾಜಧಾನಿಯಲ್ಲಿ ಶ್ರೀಮತಿಯರು’. ಈ ಪುಸ್ತಕ ಪರಿಚಯವನ್ನು ಲೇಖಕರಾದ ರಘುನಾಥ ಕೃಷ್ಣಮಾಚಾರ್ ಅವರು ಓದುಗರ ಮುಂದಿಟ್ಟಿದ್ದಾರೆ. ತಪ್ಪದೆ ಓದಿ…

ಪುಸ್ತಕ : ರಾಜಧಾನಿಯಲ್ಲಿ ಶ್ರೀಮತಿಯರು
ಲೇಖಕರು : ಕೆ.ಸತ್ಯನಾರಾಯಣ
ಪ್ರಕಾಶನ: ಅನಂತ ಪ್ರಕಾಶನ

ಮೂರು ದಶಕಗಳ ಮೊದಲು ಕಾದಂಬರಿ ರಚನೆಯಲ್ಲಿ ಹೊಸ ವಿನ್ಯಾಸ ಸೃಷ್ಟಿಸಿದ ಮೊದಲ ಕೃತಿ. ಬಹುಶಃ ಮುಂದೆ ಅವರು ಬರೆದ ಗೌರಿ ಕಾದಂಬರಿಯ ಮುನ್ನುಡಿ ಇದು ಎಂದರೆ ಉತ್ಪ್ರೇಕ್ಷೆಯಲ್ಲ. ಕಾವ್ಯ ರೂಪದಲ್ಲಿ ರಚಿಸಿದ ಈ ಕಾದಂಬರಿ ಅದರ ಸ್ತ್ರೀ ಕಥನದ ಬಹುತ್ವಕ್ಕೆ ಹೇಳಿ ಮಾಡಿಸಿದಂತಿದೆ.

 

ಏಕೆಂದರೆ ಹೆಣ್ಣಿನ ಸಂಕಟಕ್ಕೆ ಕಾಲ ದೇಶಗಳ ಅಂತಸ್ತುಗಳ ಹಂಗಿಲ್ಲ. ಎಲ್ಲಾ ಕಡೆಯು ಅವಳ ಸ್ಥಿತಿ ಒಂದೇ. ಅದನ್ನು ಸ್ಥಾಪಿಸಲು ಇಲ್ಲಿ ಏಕಕಾಲಕ್ಕೆ ಪುರಾಣ, ಐತಿಹಾಸಿಕ, ಪಾಶ್ಚಾತ್ಯ ಮತ್ತು ವರ್ತಮಾನದ ಪಾತ್ರಗಳನ್ನು ಒಟ್ಟಿಗೆ ತರಲಾಗಿದೆ: ಕೌಸಲ್ಯೆ, ಕೈಕೇಯಿ, ಸೀತೆ, ಶೂರ್ಪಣಕಿ, ಮಂಡೋದರಿ ರಾಮಾಯಣದ ಪಾತ್ರಗಳಾದರೆ, ಕುಂತಿ, ದ್ರೌಪದಿಯರು ಮಹಾಭಾರತದ ಪಾತ್ರಗಳು. ನ್ಯಾನ್ಸಿ ಪಾಶ್ಚಾತ್ಯ ಪಾತ್ರವಾದರೆ, ರೂಪ …ವರ್ತಮಾನದ ಪಾತ್ರಗಳು. ಇವರೆಲ್ಲ ಒಗ್ಗೂಡುವುದು ಅಂಗನವಾಡಿ ಕಾರ್ಯಕರ್ತೆಯರ ಮೂಲಕ. ಇದಕ್ಕೆ ಸಾಕ್ಷಿಯಾಗಿ, ಪಾತ್ರಧಾರಿಗಳಾಗಿ, ಸೂರ್ಯ, ಚಂದ್ರ, ದೀಪದ ಮಲ್ಲಿ , ಮಲ್ಲಿಗೆ .‌ಇವರ ಮೂಲಕ ಕತೆಗಳು ಹೇಳಲ್ಪಟ್ಟಿವೆ. ಇವುಗಳ ಸಾಂಕೇತಿಕ ಮಹತ್ವವನ್ನು ಎತ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ. ( ಅನಾದಿ ಕಾಲದಿಂದಲೂ ಎಲ್ಲಾ ಕಡೆ ನಡೆದುಕೊಂಡು ಬಂದಿರುವ ಸ್ತ್ರೀ ಶೋಷಣೆಯನ್ನು ಇವರು ತಾನೇ ‌ಅಧಿಕೃತವಾಗಿ ಬಲ್ಲವರು)

(‘ರಾಜಧಾನಿಯಲ್ಲಿ ಶ್ರೀಮತಿಯರು’ ಪುಸ್ತಕದ ಲೇಖಕರು ಕೆ.ಸತ್ಯನಾರಾಯಣ)
‌‌‌‌‌
ಇವರ ಸಂಕಟದ ಕತೆಗಳನ್ನು ಕೇಳಿಯು‌ ಅವರಿಗೆ ಸ್ಪಂದಿಸದ ಮಂತ್ರಿಗಳ ಜಡತ್ವದ ( ತುಟಿ ಅನುಕಂಪ ಬಿಟ್ಟು) ವಿಡಂಬನೆ ಹರಿತವಾಗಿದೆ. ಸ್ವತಃ ಸರಕಾರಿ ಅಧಿಕಾರಿಯಾದ ಲೇಖಕರು ತೋರಿಸುವ ಈ ದಿಟ್ಟತನ ಮತ್ತು ಸಂವೇದನಾ ಶೀಲತೆ ಅಪೂರ್ವ. ಮೂರು ದಶಕಗಳ ಹಿಂದೆ ಬರೆದ ಈ ಕೃತಿ ಇಂದಿಗೂ ಸಮಕಾಲೀನ ವಾಗಿರುವುದಕ್ಕೆ ಈಚೆಗೆ ಅಂಗನವಾಡಿ ಕಾರ್ಯಕರ್ತೆಯರು , ತಮ್ಮ ಬೇಡಿಕೆಗಳೊಂದಿಗೆ ರಾಜಧಾನಿಯನ್ನು ಮುತ್ತಿದ್ದು ಸಾಕ್ಷಿ ಎಂದು ಲೇಖಕರು ತಮ್ಮ ಈ ಕೃತಿಯ ಎರಡನೆಯ ಮುದ್ರಣದ ಮುನ್ನುಡಿಯಲ್ಲಿ ಸೂಚಿಸಬೇಕಾಗಿ ಬಂದದ್ದು ಒಂದು ಬಗೆ ವಿಷಾದದ ಸಂಗತಿಯಾಗಿದೆ.

ಬಹುಶಃ ಕನ್ನಡ ಕಾದಂಬರಿ ಪರಂಪರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ವಸ್ತುವಾಗಿರಿಸಿಕೊಂಡು ಬರೆದ ಏಕೈಕ ಕೃತಿ ಇದು ಎಂದರೆ ಉತ್ಪ್ರೇಕ್ಷೆಯಲ್ಲ. ಅದರಲ್ಲಿ ಪುರಾಣ. ಇತಿಹಾಸಗಳನ್ನು ಸಮಾವೇಶಗೊಳಿಸುವ ಮೂಲಕ ಸ್ತ್ರೀ ಕಥನವನ್ನಾಗಿಸಿ ಇದನ್ನು ಕಾಲಾತೀತಗೊಳಿಸಿರುವುದು ಈ ಕೃತಿಯ ಅನನ್ಯತೆಯಾಗಿದೆ. ಅದಕ್ಕೆ ಅವರು ಬಳಸಿದ ಕಾವ್ಯರೂಪ ಇದರ ಇನ್ನೊಂದು ವೈಶಿಷ್ಟ್ಯ.


  • ರಘುನಾಥ ಕೃಷ್ಣಮಾಚಾರ್ (ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು, ಲೇಖಕರು) 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW