“ಈ ನೆಲದ ಜೀವಜಲವೆಂಬ ಶಕ್ತಿಯೇ ಮಹಿಳೆ”

ಎಲ್ಲಿ ಹೆಣ್ಣು ಪೂಜೆಗೊಳಗಾಗುತ್ತಾಳೊ ಅಂತಹ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದನ್ನು ನಾವು ಈ ಸ್ತೋತ್ರದ ಮೂಲಕ ಕಾಣಬಹುದಾಗಿದೆ. ಅಬ್ಬಕ್ಕ, ಚೆನ್ನಮ್ಮ, ಲಕ್ಷ್ಮೀಬಾಯಿ,ಒನಕೆ ಒಬವ್ವ ನಂತಹ ಧೀರಾತಿಧೀರ ವೀರ ಮಹಿಳೆಯರನ್ನು ಕೊಟ್ಟ ಭಾರತ ದೇಶ ಇದು. ಹೆಣ್ಣಿನ ಶಕ್ತಿ, ತಾಳ್ಮೆಯ ಕುರಿತು ಲೇಖಕಿ ವಾಣಿ ಭಂಡಾರಿ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||

ಎಲ್ಲಿ ಹೆಣ್ಣು ಪೂಜೆಗೊಳಗಾಗುತ್ತಾಳೊ ಅಂತಹ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದನ್ನು ನಾವು ಈ ಸ್ತೋತ್ರದ ಮೂಲಕ ಕಾಣಬಹುದಾಗಿದೆ. ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಸ್ತ್ರೀಗೆ ವಿಶೇಷವಾದ ಗೌರವವನ್ನು ಮೌಲ್ಯವನ್ನು ನೀಡಲಾಗಿತ್ತು. ಪುರುಷರಿಗಿಂತ ಯಾವುದೇ ವಿಚಾರದಲ್ಲಿ ಸಹ ಹೆಣ್ಣು ಕಡಿಮೆ ಇಲ್ಲ ಎಂಬುದನ್ನು ಮನಗಾಣಬೇಕಾದ ಅಂಶ ನಿದರ್ಶನಗಳು ಬಹಳಷ್ಟು ನಮ್ಮ ಚರಿತ್ರೆಯ ಪುಟಗಳಲ್ಲಿ ಕಾಣಸಿಗುತ್ತವೆ. ವೇದ ಕಾಲದಲ್ಲಿ ಸಹ ಮೈತ್ರಾಯೀ, ಗಾರ್ಗಿ,ಇಂತಹ ಹಲವಾರು ಮಹಾನ್ ಯೋಗಿನಿಯರು ಪಾಂಡಿತ್ಯಪೂರ್ಣವಾದಂತಹ ವೇದಗಳ ಸಭೆಯಲ್ಲಿ ಅವರಿಗೆ ವಿಶೇಷವಾದ ಸ್ಥಾನಮಾನಗಳಿರುತ್ತಿದ್ದವು. ಅವರುಗಳು ಸಹ ಪುರುಷರಂತೆ ವೇದಾಭ್ಯಾಸವನ್ನು ಮಾಡಿರುವುದಕ್ಕೆ ಸಾಕಷ್ಟು ಪುರಾವೆಗಳು ನಮಗೆ ದೊರೆತಿವೆ.

ಇನ್ನೂ ಪುರಾಣಗಳ ಕಡೆ ದೃಷ್ಟಿ ಹರಿಸಿದಾಗ ಸೀತೆಯಾದಿಯಾಗಿ,ದ್ರೌಪದಿ, ಕುಂತಿ, ಉರ್ಮೆಳೆ, ಸಪ್ತಋಷಿಗಳ ಪತ್ನಿಯರು,ಇಂತಹ ಅನೇಕಾನೇಕ ಶಕ್ತಿವಂತ,ಬುದ್ದಿವಂತ ಮಹಿಳೆಯರ ಸಾಹಸಗಾಥೆಗಳೇನು ಕಡಿಮೆ ಇಲ್ಲ.ಅವರ ಬದುಕಿನ ಒಳತಲ್ಲಣಗಳ ಜೊತೆಗೆ ಬದುಕನ್ನು ಪ್ರೀತಿಸಿ ಸಮಾಜದೆದುರು ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದ ಚೇತನಶೀಲರು ನಮ್ಮ ಮಹಿಳೆಯರು.

ಕಾಲ ಬದಲಾದಂತೆ ಸಮಾಜದ ಆಗು ಹೋಗುಗಳು ಬದುಕಿನ ದಾರಿಗಳು ಚಿಂತನೆಗಳು ಎಲ್ಲವೂ ಸಹ ಭಿನ್ನ ಮಾರ್ಗದಲ್ಲಿ ತೆರೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಬೇಕೆಂಬಂತೆ, ಅತ್ತಿಮಬ್ಬೆಯಂತಹ‌ ದಾನಚಿಂತಮಣಿಯಂತವರು ಇದ್ದರು. ಅಬ್ಬಕ್ಕ, ಚೆನ್ನಮ್ಮ, ಲಕ್ಷ್ಮೀಬಾಯಿ,ಒನಕೆ ಒಬವ್ವ ನಂತಹ ಧೀರಾತಿಧೀರ ವೀರ ಮಹಿಳೆಯರನ್ನು ಕೊಟ್ಟ ಭಾರತ ದೇಶ ಇದು.

ಇನ್ನೂ ಸಾಹಿತ್ಯ ಕ್ಷೇತ್ರದತ್ತ ಕಣ್ಣು ಹರಿಸಿದರೆ ನಮಗೆ ಮೊದಲು ಗೋಚರಿಸುವುದೇ ದಿಟ್ಟ ನೇರ ನಡೆಯ ಅಕ್ಕಮಹಾದೇವಿ ಅಂತಹ ನಿರ್ಬೀಡೆ ವಚನಗಾರ್ತಿ.ಆಗಿನ‌ ಸಮಾಜದಲ್ಲಿ ಅಷ್ಟು ಸುಲಭವಲ್ಲದಂತಹ ಜನರ ಮನಸ್ಥಿತಿ ನಿರ್ಮಾಣ ಆದಾಗ್ಯ ಸಹ, ಎಡೆಬಿಡದೆ ತನ್ನ ಜ್ಞಾನಬಲದಿಂದ ಪುರುಷರಿಗೆ ಸರಿಸಮವಾಗಿ ಕದಳಿಯ ಕರ್ಪೂರವಾಗಿ ಕಂಗೊಳಿಸಲು ನಡೆಸಿದ ಅವಳ ಆಂತರ್ಯದ ಹೋರಾಟವೇನು ಕಡಿಮೆ ಎನ್ನುವಿರ.ಆದರೆ ಋತುಮಾನ ಕಳೆದಂತೆ ಸಾಲು-ಸಾಲು ಪರಕೀಯ ದಾಳಿಗಳ ನಲುಗುವಿಕೆಯಿಂದ ಭಾರತದ ಈ ಸಂಸ್ಕಾರ ಮತ್ತು ಸಂಸ್ಕೃತಿಗೆ ದಕ್ಕೆ ಬಂದಿದ್ದು ಆ ನೋವಿನ ತಲ್ಲಣ ಹೇಳಲಾಗದಷ್ಟು.ಇನ್ನೂ ಮುಸ್ಲಿಂ ದಾಳಿಯಿಂದ ನಮ್ಮ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರದಂತೆ ತಡೆ ಹಾಕಲಾಯಿತು. ಕ್ರಿಶ್ಚಿಯನ್ನರ ದಾಳಿಯಿಂದ ಮಹಿಳೆಯನ್ನು ರಕ್ಷಿಸಲು ವೇದಿಕೆಯ ಮುಖ್ಯವಾಹಿನಿಯಿಂದ ದೂರವೇ ಇಡಲಾಯಿತು. ಆದರೆ ಇದೆಲ್ಲವನ್ನೂ ಮೀರಿಯೂ ಸಹ ತಮ್ಮ ಜಾಣ್ಮೆ ಶೌರ್ಯ ಪರಾಕ್ರಮ ತೋರಿದವರಲ್ಲಿ ನಮ್ಮ ಹೆಮ್ಮೆಯ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಮೋಸಕೆ ಬಲಿಯಾದರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೀರಾವೇಶದಿಂದ ಹೋರಾಡಿ ರಣರಂಗದಲ್ಲಿ ಸಾವನ್ನಪ್ಪಿದಳು. ರಾಣಿ ಅಬ್ಬಕ್ಕ ಸಹ ಪೋರ್ಚುಗೀಸರ ಜತೆಗೆ ಬಡಿದಾಡುತ್ತಲೇ ಮಡಿದಳು.

ಸಾವಿರಾರು ವರ್ಷದ ಇತಿಹಾಸ ಹೊಂದಿದ ನಮ್ಮ ಭಾರತಕ್ಕೆ ಕೊಳಕು ಮನಸ್ಥಿತಿಗಳನ್ನು ಹೊಂದಿದ ಪರದೇಶಿಯರ ಆಕ್ರಮಣ ಅವರ ಒಳ ಕುತಂತ್ರ, ಒಡೆದು ಆಳುವ ನೀತಿಯನ್ನು ತಂದೊಡ್ಡಿ ಭಾರತೀಯರ ಬದುಕನ್ನು ಹೈರಾಣಾಗಿಸಿದಾಗ, ಸಹಜವಾಗಿ ಮಹಿಳೆಯರನ್ನು ಕಾಪಾಡುವ ಜರೂರತ್ತು ನಮ್ಮ ಸಮಾಜಕ್ಕೆ ದೊಡ್ಡ ಸವಾಲಾಗಿತ್ತು. ಆ ಕಾರಣದಿಂದಾಗಿಯೇ ಹಲವಾರು ಶತಮಾನಗಳಿಂದ ಆಕೆ ಮುಖ್ಯಭೂಮಿಕೆಗೆ ಬರುವಲ್ಲಿ ತೊಡಕುಗಳು ತಲ್ಲಣಗಳು ಎದುರಾಗುತ್ತಿದ್ದವು.ಆದರೆ ಕಾಲ ಏನೇ ಬದಲಾದರು ಸ್ತ್ರೀ ಸಹಜ ಭಾವೋದ್ವೇಗಗಳು ಬದಲಾಗಲು ಸಾಧ್ಯವೇ?? ಆಕೆ ತನ್ನನ್ನು ‌ಹೆಣ್ಣು ಎಂದು ಕರೆಸಿಕೊಳ್ಳುವ ಮೌಲ್ಯಯುತ ಭಾವದ ಜೊತೆಗೆ ಗೌರವವನ್ನು ಸಂಪಾದಿಸುವಲ್ಲಿ ಆಕೆಗೆ ಹುಟ್ಟಿನಿಂದಲೇ ಸಹಜವಾಗಿ ಸಿದ್ದಿಸುವ ಸೃಜನಾತ್ಮಕ ಕಲೆಯನ್ನು ಸೃಷ್ಟಿಸುವ ಕಾರ್ಯಕೆ ಆಕೆ ಎದೆಗುಂದದಿರುವುದೇ ಆಕೆಯ ಶಕ್ತಿ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. “ಸ್ತ್ರೀಣಾಂ ದ್ವಿಗುಣ ಮಹಾರೋ,ಬುದ್ದಿಶ್ಚಾಪಿ ಚತುರ್ಗುಣ,ಸಾಹಸಂ ಷಡ್ಗುಣಂಶ್ಚೈವ,ಕಾಮೋಷ್ಠ ಗುಣಮುಚ್ಛತೇ.” ಕ್ರಮವಾಗಿ ಆಹಾರ,ಬುದ್ದಿ,ಸಾಹಸ ಕಾಮ ಹೀಗೆ ಎಲ್ಲದರಲ್ಲೂ ಪುರುಷರಿಗಿಂತ ಹೆಚ್ಚಳತೆಯನ್ನು ಹೊಂದಿದ ಆಕೆ ಸದಾ ಕಾರ್ಯತತ್ಪರಳಾಗಿರಲು ಸಂತಸ ಪಡುತ್ತಾಳೆ.

ಒಬ್ಬ ಪುರುಷನ ಸಾಧನೆಯ ಹಿಂದೆ ಹೇಗೆ ಸ್ತ್ರೀ ಇರುವಳೊ ಹಾಗೆ, ಒಬ್ಬ ಸ್ತ್ರೀ ಸಾಧನೆಯ ಹಿಂದೆ ಪುರುಷ ಇದ್ದೆ ಇರುತ್ತಾನೆ. ಕಾರಣವಿಷ್ಟೆ ಈ ಜಗತ್ತು ನಿಂತಿರುವುದೇ ಪ್ರಕೃತಿ ಪುರುಷ ಜೀವಜಾಲದೊಂದಿಗೆ ಹೆಣೆದ ಬಂಧವಾಗಿರುವುದರಿಂದಾಗಿ ಒಂದಕ್ಕೊಂದು ಪೂರಕವಾಗಿ ಇರಲೇಬೇಕು. ಇದು ಪ್ರಕೃತಿಯ ನಿಯಮಗಳೊಂದು.ಗಾಂಧೀಜಿಯವರ ಸಾಧನೆಯ ಹಿಂದೆ ಕಸ್ತೂರಿ ಭಾ ನಂತವರು ಇದ್ದರೆ, ರಾಮಕೃಷ್ಣ ಪರಮಹಂಸರ ಹಿಂದೆ ಶಾರದ ಮಾತೆ ಇದ್ದರು.ಆದರೆ ಇಷ್ಟೆಲ್ಲ ಮಹಿಳೆಯನ್ನು ಕೊಂಡಾಡುವ ನಾವುಗಳೇ ಈ ಸಮಾಜ ಎರಡು ಜಡೆ ಸೇರಿದರೆ ಜಗಳ ದೊಂಬಿ,ಕದನ ಏನೆಲ್ಲಾ ಹತ್ತಾರು ಪುಕಾರಿನ ಹೆಸರುಗಳನ್ನು ಕೊಟ್ಟು ಆಕೆಯ ಮನದಾಳದಲ್ಲಿ ತನ್ನೊಳಗೆ ತಾನೆ ಸರಿಯಿಲ್ಲವೇನೊ ಎಂಬಷ್ಟರ ಮಟ್ಟಿಗೆ ಹೆಣ್ಣನ್ನು ಈ ಸಮಾಜ ಸಂಕುಚಿತಗೊಳಿಸಿಬಿಡುವುದು ಮಾತ್ರ ದುರ್ದೈವವೇ ಸರಿ.ಅದೇನೆ ಇದ್ದರೂ ಮಹಿಳಾ ಸಾಧಕರಿಗೇನು‌ ಕೊರತೆ ಇಲ್ಲ. ಕಲ್ಪನ ಚಾವ್ಲ, ಸುನೀತ ವಿಲಿಯಮ್ಸ್, ಸಾಲುಮರದ ತಿಮ್ಮಕ್ಕ, ಅವನಿ ಚತುರ್ವೇದಿ, ಸ್ನೇಹ ದುಬೆ, ಕೃತಿ ಕಾರಂತ್, ತುಳಿಸಿಗೌಡ, ಟೆಸ್ಸಿ ಥಾಮಸ್,ವಾಣಿ ಕೋಲಾ,ರಿಚ್ ಕರ್,ಅರುಣಿಮ ಸಿನ್ಹಾ,ಗೀತಾ‌ ಗೋಪಿನಾಥ್,ಇನ್ನೂ ಸಾಹಿತ್ಯ‌ ಕ್ಷೇತ್ರಕ್ಕೆ ಬಂದರೆ ಅವರ ಪಡೆ ಅಗಾಧವಾಗಿದೆ. ಉದಾಹರಣೆಗೆ,,ಕಲ್ಯಾಣಮ್ಮ,ಶ್ಯಾಮಲದೇವಿ,ಕೊಡಗಿನ ಗೌರಮ್ಮ,ಬೆಳಗೆರೆ ಜಾನಕಮ್ಮ, ತ್ರಿವೇಣಿ, ವೈದೇಹಿ, ಪ್ರತಿಭಾ ನಂದಕುಮರ್ ಹೆಚ್.ಎಲ್. ಪುಪ್ಷ, ಅನಿತಾ ದೇಸಾಯಿ, ಶರಣ್ಯ ಮಣಿವಣ್ಣನ್, ಅದಿತಿ‌ ಪಾಟೀಲ್‌‌, ಮಹಾಶ್ವೇತ‌ ದೇವಿ,ಮಣಿಕುಂತಲ ಸೇನ್, ಮಂಜುಕಪೂರ್, ಕಮಲದಾಸ್, ದಲೀಪ್ ಕೌರ್ ತೀವಾನ, ಇತ್ಯಾದಿ,,,,,ಇಲ್ಲಿ‌ ಕೇವಲ ಕೆಲವು ಮಹಿಳಾ ಸಾಹಿತಿಗಳ ಹೆಸರಷ್ಟನ್ನೆ ಹೆಸರಿಸಿರುವೆ ಸ್ಥಳದ ಆಭಾವದಿಂದ. ನಮ್ಮ‌ ಮಹಿಳಾ ಕವಯತ್ರಿಯರ ಲೇಖನಿಯ ಜಾಣ್ಮೆ ಜ್ಞಾನ ಸೃಜನಶೀಲತೆಯ ಸಶಸ್ತ್ರ ಪಡೆ ಬಹಳ ಅತ್ಯುತ್ತಮ ಅಗಾಧ‌ ಪಾಂಡಿತ್ಯ ಪೂರ್ಣತೆಯನ್ನು ಹೊಂದಿರುವುದು ನಾವು ಅವಲೋಕಿಸಬಹುದು.

ಈ ನಿಟ್ಟಿನಲ್ಲಿ ನಮ್ಮ‌ ರಾಷ್ಟ ಕವಿ ಜಿ.ಎಸ್ ಶಿವರುದ್ರಪ್ಪ ನವರು ಹೆಣ್ಣನ್ನು ಕುರಿತು ಅತ್ಯಂತ ಗೌರವಯುತವಾದ ಮೌಲ್ಯಭರಿತ ಸಾಹಿತ್ಯದೊಂದಿಗೆ ಹೀಗೆ ಹೇಳುತ್ತಾರೆ.

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ…

ಹೀಗೆ ಹಲವು ರೀತಿಯಲ್ಲಿ ಆಕೆಯನ್ನು ವರ್ಣಿಸಿ ಆಕೆಯ ವ್ಯಕ್ತಿತ್ವವನ್ನು ಗಗನಕ್ಕೇರಿಸಿ ಮಾನ್ಯತೆ ನೀಡಿ ಗೌರವಿಸುತ್ತಾರೆ.ವರ್ಣನೆಗಳಿಗೆ ನಿಲುಕದ ಆಕೆಯನ್ನು ನಾವು ಕೇವಲ ಪದಗಳ ಮೂಲಕ ಕಟ್ಟಿ ಕೊಡಲು ಆಗುವುದಿಲ್ಲ. ಯಾಕೆಂದರೆ ಆಕೆ ಒಂದು ಶಕ್ತಿ, ಎಲ್ಲರ ಬಾಳಿನ ಬೆಳಕು,,ಆ ಶಕ್ತಿಯ ಪಾತ್ರಗಳು ಮಾತ್ರ ಭಿನ್ನ ಭಿನ್ನವಷ್ಟೆ.

ತಾಯಿಯಾಗಿ, ಹೆಂಡತಿ, ಗೆಳತಿ, ಅಕ್ಕ, ತಂಗಿ, ಅತ್ತೆ, ಅಜ್ಜಿ ಹೀಗೆ ಕಾಲಕಾಲಕ್ಕೆ ಪಾತ್ರಗಳನ್ನು ಬದಲಿಸುತ್ತಾ, ಋತುಗಳಿಗೆ ಹೊಂದಿಕೊಳ್ಳುತ್ತಾ ಸಾಗುವ ಆಕೆಯಲ್ಲಿ ಮಹೋನ್ನತ ಚಿಂತನೆ ಹಾಗೂ ಮಹತ್ವಾಕಾಂಕ್ಷೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಈ ನಿಟ್ಟಿನಲ್ಲಿ ಹೆಣ್ಣು ಜೀವಗಳ ಒಳ ತುಡಿತಗಳನ್ನರಿತ “ಪ್ರೊ ಲಾರಿ” ಅವರು ತಮ್ಮ ತಾಯಿಯ ನೆನಪಿನಾರ್ಥವಾಗಿ ಸಾರ್ಥಕತೆಯ ಬದುಕಿಗೊಂದು ದೀವಿಗೆಯೆಂಬಂತೆ “ಅಖಿಲ ಭಾರತೀಯ ಕವಿಯತ್ರಿಯರ ಸಂಘ” (AIPC) ಎಂಬಂತಹ ಮಹತ್ವದ ವೇದಿಕೆಯನ್ನು ‌ಹುಟ್ಟು ಹಾಕಿರುವುದು ವಿಶೇಷಗಳಲ್ಲಿ ವಿಶೇಷ.ಈ ವೇದಿಕೆಯಲ್ಲಿ ಸಾವಿರಾರು ದೇಶ ವಿದೇಶಗಳ ಮಹಿಳೆಯರು ತಮ್ಮ ಸೃಜನಾತ್ಮಕ ಚಟುವಟಿಕೆಗಳನ್ನು ಅತ್ಯಂತ ಶಿಸ್ತುಬದ್ದವಾಗಿ ತಮ್ಮ ಮನದ ಬಿತ್ತಿಯಿಂದ ತೆಗೆದು ಸಾಹಿತ್ಯಾಕ್ತರ ಹೊರತಾಗಿಯೂ ಸಹೃದಯ ಜೀವಗಳಿಗೆ ತಮ್ಮ ಕಲೆಯನ್ನು ಪ್ರತಿಭೆಯನ್ನು ಉಣಬಡಿಸುತ್ತಿರುವುದು ನಿಜಕ್ಕೂ ಸಂತೋಷಪಡುವ ವಿಚಾರಧಾರೆ. ಈಗಾಗಲೇ ಈ ವೇದಿಕೆ ಪ್ರಾರಂಭವಾಗಿ ಸರಿಸುಮಾರು ೨೫ ವರ್ಷಗಳಾಗಿ ಅಂದಿನಿಂದ ಇಂದಿನವರೆಗೂ ಸಹ ತಮ್ಮ ಕಲಾತ್ಮಕ ಚಟುವಟಿಕೆಗಳನ್ನು ಯಾವುದೇ ಆತಂಕವಿರದೆ,, ನಿರ್ಭೀಡೆಯಿಂದ ಎರಡೆರಡು ಜಡೆಗಳೆ ಸೇರಿ‌ ಸಾವಿರಾರು ಜಡೆಗಳು ಕೂಡಿ ಅನ್ಯೋನ್ಯತೆಯಿಂದ, ಪ್ರೀತಿ ಮಮಕಾರ,ಬಾಂಧವ್ಯಭರಿತವಾಗಿ,,”ಜಡೆ ಸೇರಿದರೆ ಜಗಳ” ಎಂಬ ಮಾತಿಗೆ ವಿರುದ್ದವಾಗಿ “ಕೂಡಿ ಬೆರೆತರೆ ಬಾಳು ಸ್ವರ್ಗ” ಎಂಬ ಉಕ್ತಿಯಂತೆ ಇಡೀ ದೇಶ ವಿದೇಶಗಳು ಸಹ ಮೆಚ್ಚುವಂತಹ ಕಾರ್ಯಕ್ರಮಗಳನ್ನು ಸತತ ೨೫ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಮಹತ್ವದ ವಿಚಾರಗಳಲ್ಲಿ ಒಂದಾಗಿದೆ,ಪ್ರತಿ ವರ್ಷವೂ‌ ಸಹ ಸಾಧಕ ಮಹಿಳೆಯರನ್ನ‌ ಆಧರಿಸಿ ಗೌರವಿಸಿ ಪ್ರಶಸ್ತಿ ನೀಡಿ ಗೌರವಾಧರಗಳಿಗೆ ಭಾಜನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ.

ಹೆಣ್ಣು ಎಲ್ಲ ಕ್ಷೇತ್ರದಲ್ಲಿಯೂ ಸಹ ಇದ್ದಾಳೆ ಮತ್ತು ಇನ್ನೂ‌ ಹೆಚ್ಚಿನ‌ ರೀತಿಯಲ್ಲಿ ಆಕೆ ತನ್ನನ್ನು ತಾನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.ಆದರೆ ಆಕೆಗೆ ಕೊಂಚ ಹಿಂಬಲವಾಗಿ ಒಂದು ಶಕ್ತಿ ನಿಂತು ಸದಾ ಹುರಿದುಂಬಿಸಿದರೆ,,ಆಕೆ ಎಲ್ಲವನ್ನೂ ಧೈರ್ಯವಾಗಿ ಸಾಧಿಸಬಲ್ಲವಳು.ಯಾಕೆಂದರೆ ಆಕೆ ಸ್ತ್ರೀ ಆಕೆ ಪ್ರಕೃತಿ,ಆಕೆ ಶಕ್ತಿ,ಆಕೆ ಜೀವಚೇತನ ಎಲ್ಲವನ್ನೂ ತನ್ನೊಡಲಿನೊಳಗೆ ಸೆಳೆದುಕೊಳ್ಳುವ ಶಕ್ತಿ ಇರುವುದು ಆಕೆಗೆ ಮಾತ್ರ ಸಾಧ್ಯ.


  • ವಾಣಿ ಭಂಡಾರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW