ಆಡುಜೀವಿತಂ (The Goat Life) ಚಲನಚಿತ್ರ

ಮಲಯಾಳಂ ಸಿನಿಮಾ ಮಾಧ್ಯಮದಲ್ಲಿ ಸತತವಾಗಿ ಹೊಸ ಹೊಸ ಪ್ರಯೋಗ, ಅನ್ವೇಷಣೆಗಳನ್ನೂ ಮಾಡುತ್ತಿದೆ ಅಂತಹ ಯಶಸ್ವಿ ಚಿತ್ರಗಳಲ್ಲಿ ‘ಆಡುಜೀವಿತಂ’ ಕೂಡಾ ಒಂದಾಗಿದ್ದು, ಈ ಸಿನಿಮಾ ಕುರಿತು ಲೇಖಕರಾದ ರವೀಂದ್ರ ಕೆ. ಆರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಟ್ರೈಲರ್ ಹಾಗೂ ಮಾಧ್ಯಮ ವರದಿಗಳ ಮೂಲಕ ಬಹು ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಮಾರ್ಚ್ 28 ರಂದು ಬಿಡುಗಡೆಯಾದ ದಿನವೇ ನಾನು ಇಂಗ್ಲೆಂಡ್ ಗೆ ಹಾರಿದ ಕಾರಣ ಮಿಸ್ ಮಾಡಿಕೊಂಡಿದ್ದೆ. ಹಾಗಾಗಿ, ಮೊನ್ನೆ 19 ರಂದು Netflix ನಲ್ಲಿ ಬಿಡುಗಡೆಯಾದ ದಿನವೇ ನೋಡಿದೆ. ನಿರೀಕ್ಷೆ ಹುಸಿಯಾಗಲಿಲ್ಲ.

ನಜೀಬ್ ಎಂಬ ಮಲಯಾಳೀ ವಲಸಿಗನ ಬದುಕಿನ ನೈಜ ಘಟನೆಗಳನ್ನು ಆಧರಿಸಿ, ಮಲಯಾಳಂ ಲೇಖಕ ಬೆನ್ಯಾಮಿನ್ ಬರೆದು 2008 ರಲ್ಲಿ ಬಿಡುಗಡೆಯಾಗಿದ್ದ, ಈವರೆಗೂ ನೂರು ಮುದ್ರಣಗಳನ್ನು ಕಂಡಿರುವ ಹಾಗೂ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಗಳಿಸಿರುವ ‘ಆಡುಜೀವಿತo’ ಕಾದಂಬರಿಯನ್ನು, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ( Blessy Ipe Thomas ) ತೆರೆಯ ಮೇಲೆ ತಂದಿದ್ದಾರೆ.

ಈ ಕಾದಂಬರಿಯ ಇಂಗ್ಲಿಷ್ ಭಾಷಾoತರವನ್ನಾಗಲೀ, ಕನ್ನಡಕ್ಕೆ ತಂದ ಡಾ. ಅಶೋಕ್ ಕುಮಾರ್ ಅವರ ಕನ್ನಡ ಅವತರಣಿಕೆಯನ್ನಾಗಲೀ ಓದಿರದ ನನಗೆ, ಚಿತ್ರವು ಎಷ್ಟರ ಮಟ್ಟಿಗೆ ಕಾದಂಬರಿಯ ಚಿತ್ರವನ್ನು ಕಟ್ಟಿ ಕೊಟ್ಟಿದೆ ಎಂದು ಅವಲೋಕಿಸಲು ಸಾಧ್ಯವಾಗದು. ಒಂದು ಸಾಹಿತ್ಯ ಕೃತಿಯನ್ನು ದೃಶ್ಯ ಸಂವಹನಕ್ಕೆ ಅಳವಡಿಸುವಾಗ ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ನಿರ್ದೇಶಕರು ಮಾಡುವುದು ಸಹಜವೇ ಆದರೂ, ಈ ಚಿತ್ರವು ಸೃಜನಶೀಲ ಸಾಹಿತ್ಯ ಕೃತಿಯೊಂದರ ಅತ್ಯಂತ ಪರಿಣಾಮಕಾರಿಯಾದ Cinematic presentation ಎಂದು ನನಗಂತೂ ಅನಿಸಿತು.

ಉತ್ತಮ ಆದಾಯದ ಬದುಕಿನ ಕನಸು ಹೊತ್ತು ಕೇರಳದಿoದ ಸೌದಿ ಅರೇಬಿಯಾಕ್ಕೆ ಹೋಗಿ, ಅಲ್ಲಿ ಮೋಸದಿಂದ ದಾರಿತಪ್ಪಿ ಮರಳುಗಾಡಿನಲ್ಲಿ ಬಂದಿಯಾಗಿ, ಕುರಿಗಾಹಿಯಾಗಿ ಭೀಕರ ಸಂಕಷ್ಟಗಳ ಬದುಕಿಗೆ ಬೀಳುವ ಅಮಾಯಕ ನಜೀಬ್ ನ ವಿಮೋಚನೆಯೆಡೆಗಿನ ಜೀವನ್ಮರಣ ಹೋರಾಟವೇ ಆಡುಜೀವಿತಂ ನ ಕಥೆ.

ಹಲವು ಶ್ರೇಷ್ಠ ಚಲನಚಿತ್ರಗಳಂತೆ ಇಲ್ಲಿಯೂ ಗಟ್ಟಿ ಚಿತ್ರಕಥೆಯೇ ಚಿತ್ರದ ಜೀವಾಳವಾಗಿದ್ದರೂ, ಮುಖ್ಯ ಭೂಮಿಕೆಯ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್ ಸುಕುಮಾರನ್ ಅವರು ಸ್ವತಃ ನಜೀಬ್ ನೇ ಆಗಿ ರೂಪಾoತರ ಹೊಂದಿರುವ ಪರಿ ವಿಸ್ಮಯ ಮೂಡಿಸುತ್ತದೆ. ಗಾಢವಾಗಿ ಮನದಲ್ಲಿ ನಿಲ್ಲುವಂಥಾ ಮನೋಜ್ಞ ಅಭಿನಯ. ಅಪಾರ ಪ್ರತಿಭೆ ಹಾಗೂ ಬದ್ಧತೆಯಿರುವ ಕಲಾವಿದನಿಗೆ ಮಾತ್ರಾ ಇದು ಸಾಧ್ಯ.

ಮಾತಿಲ್ಲದ, ಹೆಚ್ಚು ಮಾತಿಗೆ ಅವಕಾಶವೇ ಇಲ್ಲದ, ವಿಶುಯಲ್ಸ್ ಗಳೇ ಪ್ರಧಾನವಾಗುವ ಈ ಚಿತ್ರದುದ್ದಕ್ಕೂ ನಿರ್ದೇಶಕನ ಹಾಗೂ ತಂತ್ರಜ್ಞ ತಂಡದ ಶ್ರೇಷ್ಠ ಕಲೆಗಾರಿಕೆ ಎದ್ದು ಕಾಣುತ್ತದೆ. ಅದರಲ್ಲೂ ಮರಳುಗಾಡಿನ ದೃಶ್ಯಗಳ ಒಂದೊಂದು ಫ್ರೇಮ್ ಕೂಡಾ ಒಂದೊಂದು ಕಲಾ ಕೃತಿಯಂತೆ ಸೆರೆ ಹಿಡಿದಿರುವ ಛಾಯಾಗ್ರಹಣ ಹಾಗೂ ಚಿತ್ರದ ಭಾವ – ಲಯಕ್ಕೆ ಪೂರಕವಾದ ಎ. ಆರ್. ರೆಹಮಾನ್ ರವರ ಕಾಡುವ ವಿಷಾದದ ಗುನುಗಿನoಥಹಾ ಹಿನ್ನೆಲೆ ಸಂಗೀತ ಸಂಯೋಜನೆ ಈ ಚಿತ್ರದ ಪ್ರಮುಖ ಅಂಶಗಳು.

ಹಾಡು, ಕುಣಿತ, ನಾಯಕ ನಟನ ವೈಭವೀಕರಣ, ಭಯಂಕರ ಬಡಿದಾಟಗಳಿರುವ ಸಿದ್ಧ ಮಾದರಿಯ wholesome entertainment ನಿರೀಕ್ಷಿಸುವವರಿಗೆ ಈ ಚಿತ್ರ ರುಚಿಸದು. ನಮ್ಮ ದೇಶದಲ್ಲೇ, ಪಕ್ಕದ ಕೇರಳದವನೇ ಆದ ನಜೀಬ್ ಅನುಭವಿಸಿದ ಕರಾಳ ಹಾಗೂ ಹೋರಾಟದ ಬದುಕಿನ ಅನಾವರಣವನ್ನು ನೋಡ ಬಯಸುವವರಿಗೆ ಇದು ಖಂಡಿತಾ ಅನನ್ಯ ಅನುಭವ ನೀಡುತ್ತದೆ.

ಸಿನೆಮಾ ಮಾಧ್ಯಮದಲ್ಲಿ ಸತತವಾಗಿ ಹೊಸ ಹೊಸ ಪ್ರಯೋಗ, ಅನ್ವೇಷಣೆಗಳನ್ನು ಮಾಡುತ್ತಿರುವ ಮಲಯಾಳಂ ಚಿತ್ರರಂಗದ ಅನೇಕ ನಿರ್ದೇಶಕರ ಸೃಜನಶೀಲತೆಯೂ, ಹಿರಿಯ ಹಾಗೂ ಮಹಾನ್ ಪ್ರತಿಭಾವಂತ ಕಲಾವಿದ ಮುಮ್ಮೋಟ್ಟಿಯನ್ನೂ ಒಳಗೊಂಡು ತಮ್ಮ ಸ್ಟಾರ್ ಗಿರಿಯ ಹಾಗೂ ಯಶಸ್ಸಿನ ಹವಾ ತಲೆಗೇರಿಸಿಕೊಳ್ಳದೇ, ಇಂಥಾ ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿರುವ ಅನೇಕ ಸ್ಟಾರ್ ನಟರ ಪ್ರಯೋಗಶೀಲತೆಯೂ ಅಚ್ಛರಿ ಮೂಡಿಸುತ್ತದೆ. ಇಂಥಹಾ ಚಿತ್ರಗಳ ಸಾಲಿಗೆ ಆಡುಜೀವಿತಂ ನಿಸ್ಸoಶಯವಾಗಿ ಇತ್ತೀಚಿನ ಹೊಸ ಸೇರ್ಪಡೆ.

ನೋಡಿಲ್ಲದಿದ್ದರೆ ನೀವೂ ಕಾಣಿ.


  • ರವೀಂದ್ರ ಕೆ. ಆರ್ –  ಬ್ಯಾನ್ಬರಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW