ಲೇಖಕಿ ಸುಮಾರಾಣಿ ಅವರು ರೋಮಾಂಚನಕಾರಿ ಘಟನೆಗಳನ್ನು ಸಣ್ಣ ಲೇಖನದ ರೂಪದಲ್ಲಿ ಓದುಗರಿಗೆ ನೀಡುತ್ತಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಘಟನೆ ೧
ಮೊನ್ನೆ ನಮ್ಮ ಶಿವಮೊಗ್ಗದಲ್ಲಿ ನೆಡೆದ ಸ್ಪೋಟ!. ಅಬ್ಬಾ… ಜೀವನದಲ್ಲಿ ಯಾವತ್ತೂ ಅಂತಹ ಸದ್ದು ನಾನೂ ಕೇಳಿಯೇ ಇಲ್ಲ. ನಮ್ಮ ಯಾಜಮಾನರಿಗೆ ಊಟ ಬಡಿಸುತ್ತಾ ಇದ್ದೆ. ಮಗ ಏನೋ ಓದ್ತಾ ಪಕ್ಕದಲ್ಲೇ ಕುಳಿತಿದ್ದ.
ಫೋಟೋ ಕೃಪೆ : tripadvisor
ರಾತ್ರಿ ಹತ್ತು ಗಂಟೆಯ ಸಮಯ ಮನೆ ಮೇಲೆ ಬಾಂಬ್ ಬಿತ್ತೇನೋ ಎನ್ನುವ ಹಾಗೆ ಜೋರಾದ ಶಬ್ದ ಓಮ್ಮೆಲೇ ಬೆಚ್ಚಿಬಿದ್ದೆವು ನಮ್ಮ ಮನೆಯ ಮೇಲಿನ ಸೋಲಾರ್ ಟ್ಯಾಂಕ್ ಏನಾದ್ರೂ ಬರ್ಸ್ಟ್ ಆಗಿರಬಹುದಾ ಹೆದರಿಕೊಂಡು ಬಾಗಿಲು ತರೆದು ಹೊರ ಬಂದ್ರೆ ಅಕ್ಕ ಪಕ್ಕದ ಜನರೆಲ್ಲ ಮನೆಯಿಂದ ಹೊರ ಬಂದು ಬೀದಿಯಲ್ಲಿ ನಿಂತಿದ್ದಾರೆ. ಎಲ್ಲರೂ ಹೆದರಿಕೊಂಡು ಭೂಕಂಪವಾಗಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ ಕೆಲವರಿಗೆ ಕಿಟಕಿ ಬಾಗಿಲು ಗೋಡೆಗಳೆಲ್ಲ ಅಲ್ಲಾಡಿದ ಅನುಭವ ಅಗಿದೆ. ಶಿವಮೊಗ್ಗ ಮಾತ್ರವಲ್ಲದೆ ಅಕ್ಕ ಪಕ್ಕದ ಊರೂಗಳಿಂದಲೂ ಜನ ಫೋನ್ ಮಾಡಿ ಸ್ಪೋಟದ ಅನುಭವ ಹೇಳ್ತಾ ಇದ್ದಾರೆ. ಆ ಘಟನೆ ಆ ಸದ್ದು ಮಾತ್ರ ನೆನಸಿಕೊಂಡರೆ ಈಗಲೂ ಭಯ ಆಗುತ್ತೆ.
ಘಟನೆ ೨
ಒಮ್ಮೆ ಹೀಗೆ ಮುಂಗಾರು ಮಳೆ ಶುರುವಾಗುವ ಮೇ ತಿಂಗಳಿನಲ್ಲಿ ತೋಟಕ್ಕೆ ಹೋಗಿದ್ದೆ ಮನೆಯಿಂದ ನಮ್ಮ ಪೇಟೆ ಮನೆಯಿಂದ ಹದಿನಾರು ಕಿಲೋಮೀಟರ್ ದೂರವಿದೆ. ತೋಟದಲ್ಲಿ ಏನೇನೋ ಕೆಲಸ ನೆಡೀತಾ ಇತ್ತು. ಅದನ್ನೆಲ್ಲ ಗಮನಿಸಿ ಸಂಜೆ ನಾಲ್ಕು ಮೂವತ್ತರ ಸುಮಾರಿಗೆ ಅಲ್ಲಿಂದ ಕಾರಿನಲ್ಲಿ ಹೊರಟೆ ಸ್ವಲ್ಪ ಮೋಡ ಆಗಿತ್ತು. ಅಷ್ಟರಲ್ಲಿ ಮನೆ ಸೇರಬಹುದೆಂದು ಹೊರಟೆ ಅರ್ದ ದಾರಿ ಬಂದಿರಬಹುದೇನೋ ಜೋರಾಗಿ ಮಳೆ ಶುರುವಾಯಿತು. ಕಾರ್ ಗ್ಲಾಸ್ ಎಲ್ಲಾ ಏರಿಸಿಕೊಂಡು ವೈಪರ್ ಆನ್ ಮಾಡಿ ನಿಧಾನವಾಗಿ ಬರ್ತಾ ಇದ್ದೆ ಇನ್ನೇನೂ ಇನ್ನೊಂದು ಐದಾರು ಕಿಲೋಮೀಟರ್ ದೂರ ಮನೆ…. ಜೋರಾಗಿ ಗುಡುಗು ಸಿಡಿಲು ಜೊತೆಗೆ ಆಲಿಕಲ್ಲು ಸಮೇತ ಮಳೆ ಬೋರೆಂದು ಸುರಿಯತೊಡಗಿತು. ರೋಡಲ್ಲಿ ಯಾರೂ ಇಲ್ಲ ವೈಪರ್ ಹಾಕಿದ್ದರೂ ರೋಡ್ ಕೂಡ ಕಾಣ್ತಾ ಇಲ್ಲ ಅಷ್ಟು ಮಳೆ.
ಫೋಟೋ ಕೃಪೆ : shutterstock
ಕಾರಿನ ಮೇಲೆಲ್ಲ ಆಲಿಕಲ್ಲು ಬೀಳ್ತಾ ಇದೆ. ಜೋರಾಗಿ ಗಾಳಿ ಬೇರೆ ಬೀಸ್ತಾ ಇದೆ. ಭಯ ಆಯ್ತು ಸೈಡಿಗೆ ಕಾರ್ ನಿಲ್ಲಿಸಿ ನಿಲ್ಲೋಣವೆಂದರೆ ಮನುಷ್ಯರ ಸುಳಿವೇ ಇಲ್ಲ!!!
ನಿಧಾನವಾಗಿ ಓಡಿಸಿಕೊಂಡು ಆಲ್ಕೊಳ ಸರ್ಕಲ್ ಅಂತ ಇದೆ ಅದು ದಾಟಿ ಮುಂದೆ ಬಂದೆ .ಮುಂದೊಂದು ಲಾರಿ ಹೋಗ್ತಾ ಇತ್ತು .ಅಲ್ಲಿ ಅರಣ್ಯ ಇಲಾಖೆಯ ಜಾಗ ಇದೆ. ರೋಡ್ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಮರಗಳು.
ನನ್ನ ಮುಂದೆ ಹೋಗ್ತಾ ಇದ್ದ ಲಾರಿಯವನು ಗಕ್ಕನೇ ಬ್ರೇಕ್ ಹಾಕಿ ನಿಲ್ಲಿಸಿದ ನೋಡಿದ್ರೆ ….ಅವನ ಮುಂದೆ ಇದ್ದ ಇನ್ನೊಂದು ಲಾರಿ ರೋಡ್ ಮಧ್ಯದಲ್ಲಿ ನಿಲ್ಲಿಸಿದ್ದಾನೆ ಆ ಲಾರಿಯ ಮೇಲೆ ದೊಡ್ಡದೊಂದು ಮರ ಉರಳಿ ಬಿದ್ದಿದೆ !!! ಎಷ್ಟು ದೊಡ್ಡ ಮರ ಅಂದ್ರೆ ರೋಡ್ ನ ಆ ತುದಿಯನ್ನೂ ದಾಟಿ ಮುಂದೆ ಬಿದ್ದಿದೆ ಅದರ ರೆಂಬೆಗಳು!
ಒಮ್ಮೆ ಎದೆ ಜಲ್ಲೆಂದಿತು.ಕೇವಲ ಐದು ನಿಮಿಷದ ಹಿಂದೆ ಬಿದ್ದಿರುವುದು.ಮಳೆಯಲ್ಲೇ ನೆನೆಯುತ್ತಾ ಲಾರಿ ಡ್ರೈವರ್ ರಿವರ್ಸ್ ತಗೊಂಡು ಹೋಗಿ ಇಲ್ಲಿ ಹೋಗೋಕಾಗಲ್ಲ ಅಂತ ರೋಡ್ ಸೈಡ್ ನಿಂತು ಕೂಗ್ತಾ ಇದ್ದ ಅದರಲ್ಲೇ ನಿಧಾನವಾಗಿ ಯೂ ಟರ್ನ್ ತಗೊಂಡು ಮುಂದೆ ಹೋಗಿ ಸಾಗರ್ ರೋಡ್ ಗೆ ಹೋಗಿ ಎ.ಪಿ.ಎಂ.ಸಿ. ಒಳಗಿಂದ ಸುತ್ತಿಕೊಂಡು ಮನೆಗೆ ಹೋದೆ ಅಷ್ಟರಲ್ಲಿ ಆಲಿಕಲ್ಲು ಬೀಳುವಿದು ನಿಂತು ಮಳೆನೂ ಸ್ವಲ್ಪ ನಿಧಾನವಾಗಿ ಬರ್ತಾ ಇತ್ತು.
ಮನೆಯೊಳಗೆ ಹೋದವಳೇ ದೇವರ ಮನೆ ಮುಂದೆ ನಿಂತು ಕೈ ಮುಗಿದೆ… ಆದ್ರೆ ಆ ರೋಚಕ ಅನುಭವ ಮಾತ್ರ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.
ಘಟನೆ ೩
YHAI ಶಿವಮೊಗ್ಗದಿಂದ ಉತ್ತರಾಖಂಡ್ ವ್ಯಾಲಿ ಆಫ್ ಫ್ಲವರ್ಸ್ ಟ್ರೆಕಿಂಗ್ ಹೋಗಿದ್ವಿ, ಸುಮಾರು ಮೂವತ್ತು ಜನ. ಐದು ವರ್ಷದ ಹಿಂದೆ ಆಗ ಆ ಕಡೆ ಎಲ್ಲಾ ತುಂಬಾ ಮಳೆ ಪ್ರವಾಹ ಬಂದಿತ್ತು.ನಾವು ಹೊರಟಿದ್ದು ಆಗಸ್ಟ್ ನಲ್ಲಿ ಅಷ್ಟು ಹೊತ್ತಿಗೆ ಸ್ವಲ್ಪ ಮಳೆ ಕಮ್ಮಿಯಾಗಿತ್ತು. ಆದ್ರೂ ಮಳೆ ಬರುವ ಚಾನ್ಸ್ ಇದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ರು. ನಮ್ಮ ಫ್ಲೈಟ್ ಎಲ್ಲಾ ಬುಕ್ ಆಗಿತ್ತು ಎಲ್ಲರೂ ಹೋಗುವ ತಯಾರಿ ಮಾಡಿ ತುಂಬಾ ಉತ್ಸಾಹದಿಂದ ಇದ್ದುದರಿಂದ ಬಂದಿದ್ದು ಎದುರಿಸೋಣ… ಹೋಗೋಣ… ಎಂದು ಹೊರಟೇ ಬಿಟ್ಟೆವು. ಹೋಗಿ ಐದಾರು ದಿನ ಮಳೆಯಲ್ಲೇ ಟ್ರೆಕಿಂಗ್ ಬೆಟ್ಟ ಗುಡ್ಡಗಳಲ್ಲಿ ಓಡಾಟ, ಕುದರೆ ಸವಾರಿ, ಮರಗಟ್ಟುವಂತಹ ಚಳಿ, ಮಧ್ಯ ಮಧ್ಯ ಬಿಸಿಲು ಒಂದು ರೀತಿಯ ಅದ್ಬುತ ಅನುಭವ. ಅದೆಲ್ಲ ಮುಗಿಸಿ ವಾಪಾಸ್ ಬರುವಾಗ ಬದರೀನಾಥ್ ಮತ್ತು ಕೇದಾರನಾಥ್ ಕ್ಕೆ ಹೋಗಿ ಬರುವುದೆಂಬ ಪ್ಲಾನ್ ಇತ್ತು. ಅಷ್ಟರಲ್ಲಿ ಜೋರು ಮಳೆ ಶುರು ಆಯ್ತು. ಕೇದಾರನಾಥಕ್ಕೆ ಹೋಗುವ ದಾರಿ ಬಂದ್ ಮಾಡಿದ್ದರು. ಹೆಲಿಕಾಪ್ಟರ್ ನಲ್ಲಿ ಕೂಡ ಹೋಗಲು ಹವಾಮಾನ ಸಹಕರಿಸುತ್ತಿಲ್ಲ ಎಂದು ಕ್ಯಾನ್ಸಲ್ ಮಾಡಿದ್ದರು.
ಫೋಟೋ ಕೃಪೆ : ANI News
ಬದರಿನಾಥಕ್ಕೆ ಬಸ್ಸಿನಲ್ಲಿ ಹೋಗೋಣವೆಂದು ಮಹಾರಾಷ್ಟ್ರದಿಂದ ಬಂದಿದ್ದ YHAI ನ ಹದಿನೈದು ಜನನೂ ಸೇರಿಸಿಕೊಂಡು ಹೃಷಿಕೇಶ್ ನಿಂದ ಒಂದು ಬಸ್ಸಿನಲ್ಲಿ ಹೊರೆಟವು. ಅಲ್ಲಿನ ರೋಡ್ ಗಳು ಗೊತ್ತಲ್ಲ ಬೆಟ್ಟದ ಸುತ್ತ ಸುತ್ತಿಕೊಂಡು ಹಾವಿನ ತರ. ಅರ್ದ ದಾರಿ ಹೋಗಿದ್ದೆವು. ಮಳೆ ಭೋರೆಂದು ಸುರಿಯತೊಡಗಿತು.
ಭೂಮಟ್ಟದಿಂದ ಸುಮಾರು ಎತ್ತರದಲ್ಲಿ ದುರ್ಗಮ ಹಾದಿ ಬೇರೆ ಮಳೆಗೆ ದಾರೀನೂ ಸರಿಯಾಗಿ ಕಾಣ್ತಾ ಇಲ್ಲ !!! ನೋಡ ನೋಡುತ್ತಲೇ ರಸ್ತೆಯ ತುಂಬಾ ನೀರು ನಮ್ಮ ಬಸ್ಸಿನ ಅರ್ಧ ಭಾಗ ನೀರಲ್ಲಿದೆ. ಡ್ರೈವರ್ ನಿಧಾನವಾಗಿ ಓಡಿಸ್ತಾ ಇದ್ರು. ನಾವು ಜೋರಾಗಿ ಭಜನೆ ಮಾಡಲು ಶುರು ಮಾಡಿದೆವು. ಒಂದು ಕಡೆ ಬಸ್ಸು ನಿಲ್ಲಿಸಿ ಸ್ವಲ್ಪ ಹೊತ್ತು ನಿಂತೆವು ಪಕ್ಕದಲ್ಲೇ ಅಲಕಾನಂದ ಭೋರ್ಗೆರೆದು ಧುಮ್ಮಿಕ್ಕುತ್ತಿದ್ದಳು. ಎಲ್ಲಿ ಬೆಟ್ಟ ಕುಸಿದು ರೋಡ್ ಮುಚ್ಚಿ ಹೋಗೋತ್ತೋ ಅಂತ ಭಯ ಆಯ್ತು .ಬದರೀನಾರಾಯಣ ನಿನ್ಮ ದರ್ಶನ ಮಾಡಲು ಬರುತ್ತಿದ್ದೇವೆ ನೀನೆ ಕಾಪಾಡಪ್ಪ ಅಂತ ಬೇಡಿಕೊಂಡ್ವಿ.
ಸ್ವಲ್ಪ ಹೊತ್ತಿನ ನಂತರ ಮಳೆ ಕಮ್ಮಿಯಾಯ್ತು ಡ್ರೈವರ್ ನಿಧಾನವಾಗಿ ಕರೆದುಕೊಂಡು ಹೋದರು.
ದರ್ಶನ ಎಲ್ಲಾ ಮುಗಿದು ಒಂದು ದಿನ ಉಳಿದು, ಮಾರನೇ ದಿನ ಮತ್ತೆ ದರ್ಶನ ಮಾಡಿ ಹೊರಟೆವು .ಮಳೆ ಇರಲಿಲ್ಲ ಆದರೆ ಹಿಂದಿನ ದಿನ ಸುರಿದ ಮಳೆಯಿಂದಾಗಿ ಅರ್ಧ ದಾರಿಯಲ್ಲಿ ಲ್ಯಾಂಡ್ ಸ್ಲೈಡ್ ಆಗಿ ಬೆಟ್ಟ ಕುಸಿದು ಸಂಪೂರ್ಣ ರೋಡ್ ಮುಚ್ಚಿಹೋಗಿತ್ತು. ಸುಮಾರು ಎರಡು ಗಂಟೆ ರೋಡ್ ನಲ್ಲಿ ಕಾದೆವು. ಬಸ್ಸಿನಿಂದ ಕೆಳಗಿಳಿದು ನೋಡಿದರೆ ಕೆಳಗಡೆ ಪ್ರಪಾತ ಬೆಟ್ಟದ ಮೇಲೆ ನಾವು. ಮಿಲಿಟರಿಯವರು ಜೆ.ಸಿ.ಬಿ. ತಂದು ಕ್ಲಿಯರ್ ಮಾಡಿ ಮುಂದೆ ಹೋಗಲು ದಾರಿ ಮಾಡಿಕೊಟ್ಟರು.
ನಂತರ ನಿಧಾನವಾಗಿ ಚಲಿಸಿ ಅಂತೂ ನಮ್ಮ ಜಾಗ ತಲುಪಿದೆವು. ಈ ರೋಚಕ ಅನುಭವವನ್ನು ಮರೆಯಲು ಸಾಧ್ಯವೇ ಇಲ್ಲ.
ಘಟನೆ ೪
ಅಮರ್ ನಾಥ್ ಯಾತ್ರೆಗೆ ಅಕ್ಕ ನಾನೂ ಫ್ರೆಂಡ್ಸ ಜೊತೆ ಹೋಗಿದ್ದೆವು. ಜಮ್ಮುಗೆ ಫ್ಲೈಟ್ ನಲ್ಲಿ ಹೋಗಿ ಅಲ್ಲಿಂದ ಪೆಹಲ್ಗಾವ್ ಎಂಬ ಊರಿಗೆ ಬಸ್ಸಿನಲ್ಲಿ ಹೋಗಿ, ಅಲ್ಲಿಂದ ಎಂಟು ಕಿಲೋಮೀಟರ್ ಹೆಲಿಕಾಪ್ಟರ್ ನಲ್ಲಿ ಅಮರ್ ನಾಥ್ ಬೆಟ್ಟದ ಮೇಲಿರುವ ಒಂದು ಹೆಲಿಪ್ಯಾಡ್ ಗೆ ಕರೆದುಕೊಂಡು ಹೋಗುತ್ತೇವೆ. ಮುಂದೆ ಐದಾರು ಕಿಲೋಮೀಟರ್ ನೆಡೆದುಕೊಂಡು ಅಥವಾ ಡೋಲಿಯಲ್ಲೋ, ಕುದುರೆಯ ಮೇಲೋ ಹೋಗಬಹುದು ಎಂದರು. ಸರಿ ಎಂದು ಹೊರೆಟೆವು. ಮೈ ಕೊರೆಯುವಂತಹ ಚಳಿ. ಮಂಜು ಬೇರೆ ಆವರಿಸಿತ್ತು. ಒಮ್ಮೆ ಐದು ಜನ ಮಾತ್ರ ಹೆಲಿಕಾಪ್ಟರ್ ನಲ್ಲಿ ಕೂರ ಬಹುದಿತ್ತು. ಹೆಲಿಕಾಪ್ಟರ್ ಓಡಿಸ್ತಾ ಇದ್ದಿದ್ದು ನಮ್ಮ ಬೆಂಗಳೂರಿನ ಲೇಡಿ ನಮಗೆ ಒಂದು ರೀತಿ ರೋಮಾಂಚನ.
ಫೋಟೋ ಕೃಪೆ : british
ನಾನು ಅಕ್ಕ ಬೇರೆ ಬೇರೆ ಗುಂಪಿನಲ್ಲಿ ಸೇರಿಕೊಂಡೆವು. ನಾವೊಂದಿಷ್ಥು ಜನರನ್ನು ಕರೆದುಕೊಂಡು ಹೋಗಿ ಬಿಟ್ಟು, ಪುನಃ ವಾಪಸ್ ಹೋಗಿ ಉಳಿದವರನ್ನು ಕರೆ ತರುತ್ತಿದ್ದರು. ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಆ ಹಿಮ ತುಂಬಿದ ಪರ್ವತಗಳ ಮಧ್ಯ ಎಂತಹ ಅನುಭವ ಎಂದರೆ ಸುತ್ತ ಮುತ್ತ ಬಿಳಿ ಪರ್ವತಗಳು ನಿಜಕ್ಕೂ ಸಿನಿಮಾಗಳಲ್ಲಿ ನೋಡುತ್ತಿದ್ದ ಕೈಲಾಸ ಪರ್ವತದ ದರ್ಶನ.
ನಮ್ಮನ್ನು ಇಳಿಸಿ ಮತ್ತೆ ಹೋದ ಹೆಲಿಕಾಪ್ಟರ್ ನಮ್ಮ ಅಕ್ಕ ಇರುವ ಇನ್ನೊಂದು ಗುಂಪನ್ನು ಹತ್ತಿಸಿಕೊಂಡು ಬರುವಾಗ ಪೂರ್ತಿ ಮಂಜು ಕವಿದು ಪೈಲಟ್ ಗೆ ದಾರಿ ಕಾಣದಾಗಿದೆ. ಇನ್ನೇನು ಸ್ವಲ್ಪ ದರಲ್ಲಿ ಬೆಟ್ಟಕ್ಕೆ ಅಪ್ಪಳಿಸ ಬೇಕಾಗಿದ್ದ ಹೆಲಿಕಾಪ್ಟರ್‌ನ್ನು ತನ್ನ ಚಾಕುಚಕ್ಯತೆಯಿಂದ ಸಡನ್ ಆಗಿ ತಿರುಗಿಸಿಕೊಂಡು ವಾಪಸ್ ತಿರುಗಿಸಿಕೊಂಡು ಹೋಗಿ ಮೊದಲಿದ್ದ ಸ್ಥಳಕ್ಕೆ ಇಳಿಸಿದ್ದಾರೆ. ಒಂದು ಗಂಟೆ ಕಾದು ಮಂಜು ಕಡಿಮೆಯಾದ ನಂತರ ಮತ್ತೆ ಕರೆದುಕೊಂಡು ಬಂದರು. ನಾವು ಗಾಬರಿಯಾಗಿ ಕಾಯ್ತಾ ಇದ್ದೆವು.ನಂತರ ಅವರೆಲ್ಲಾ ಆ ಅನುಭವ ಹೇಳಿದಾಗ ಮೈ ಜುಮ್ಮೆಂದಿತು. ನಂತರ ಅಲ್ಲಿಂದ ಡೋಲಿಯಲ್ಲಿ ಹೋಗಿ ಅಮರನಾಥನ ದರ್ಶನ ಪಡೆದು ವಾಪಾಸ್ ಕುದುರೆಯ ಮೇಲೇರಿ ಇಳಿದು ಬಂದೆವು. ಈ ರೋಮಾಂಚನಕಾರಿ ಘಟನೆಗಳು ಈಗಲೂ ಮೈ ನವಿರೇಳೇಸುತ್ತವೆ.
- ಸುಮಾರಾಣಿ ಕೆ ಹೆಚ್, ಶಿವಮೊಗ್ಗ