ನಾನು ನನ್ನ ಬಗ್ಗೆ ಋಣಾತ್ಮಕವಾಗಿ ಚಿಂತಿಸುವವನು

ಪ್ರೊ. ರೂಪೇಶ್ ಪುತ್ತೂರು ಅವರು ವೃತ್ತಿಯಲ್ಲಿ ಉಪನ್ಯಾಸಕರಾದರೂ ಅವರು ಬರೆಯುವ ಬರಹಗಳು ಜೀವನಕ್ಕೊಂದು ಪಾಠದಂತೆ ಎಲ್ಲರ ಮನದಲ್ಲಿ ಹೊಕ್ಕಿಬಿಡುತ್ತದೆ….ಅವರ ಪ್ರತಿ ಬರಹದಲ್ಲಿ ಒಂದು ನೀತಿಪಾಠವಿದೆ.ತಪ್ಪದೆ ಮುಂದೆ ಓದಿ…

ನಾನು ನನ್ನ ಬಗ್ಗೆ ಋಣಾತ್ಮಕವಾಗಿ ಚಿಂತಿಸುವವನು.

ಯಾಕೆಂದರೆ, ನನ್ನ ಹದಿಹರೆಯದಲ್ಲಿ, ಸರ್ಕಾರದ ಲಿಖಿತ ಪರೀಕ್ಷೆ ತೇರ್ಗಡೆಯಾಗಿ, ಅದರ ಸಂದರ್ಶನಕ್ಕೆ ಚೆನ್ನಾಗಿ ಓದಿ, ಹೋಗುವಾಗ, ನನಗೆ ಈ ಕೆಲಸ ಖಂಡಿತಾ ಸಿಗುತ್ತದೆ ಎಂದು ಧನಾತ್ಮಕವಾಗಿ ಹೋದಾಗಲೆಲ್ಲಾ ನನಗೆ ಕೆಲಸ ಸಿಗಲೇ ಇಲ್ಲ.

ತದನಂತರ ಯಾವುದೇ ಕೆಲಸವೂ ಇದು ನನಗೆ ಸಿಗಲ್ಲ, ನಾನು ಅರ್ಹನಲ್ಲ, ನನಗೆ ಮಾಡಲು ಆಗಲ್ಲ, ನನಗೆ ಈ ಕೆಲಸದಲ್ಲಿ ಪರಾಜಯ ಖಂಡಿತ ಎಂದು ನನ್ನ ಬಗ್ಗೆ ಋಣಾತ್ಮಕವಾಗಿ ಚಿಂತಿಸಿದಲ್ಲೆಲ್ಲಾ ನಾನು ಧನ ಪರಿಣಾಮ ಅನುಭವಿಸಿದ್ದೇನೆ. ನನ್ನ ಬಗ್ಗೆ ಧನಾತ್ಮಕವಾಗಿ ಚಿಂತಿಸಿದ್ದೆಲ್ಲಾ “ಅತಿ ಆಸೆ ಗತಿ ಕೇಡು” ಎಂಬ ತಂಗುದಾಣದಲ್ಲಿ ನನ್ನ ಕೊಂಡುಹೋಗಿ ಇಳಿಸಿದೆ. ಆ ತಂಗುದಾಣಕ್ಕೆ ಹಲವಾರು ಬಾರಿ, ಈಗಲೂ ಕೆಲವೊಮ್ಮೆ, ಇಳಿದಿರುತ್ತೇನೆ – ಇಳಿಯುವವನೂ ಕೂಡಾ.

ಆದರೆ ನಿಜ ಜೀವನದಲ್ಲಿ ನಾನು ಅನುಭವಿಸದ ಎಲ್ಲಾ ಗೆಲುವುಗಳನ್ನು – ಸುಖಗಳನ್ನೂ ಕನಸಿನಲ್ಲಿ ಸಂಪೂರ್ಣ ನೆರವೇರಿಸಿ ಜಯಿಸಿ, ಸ್ವಾರ್ಥ ಸುಖದ ಉತ್ತುಂಗ ಅನುಭವಿಸಿದ್ದೇನೆ.
ಆದರೆ ಬೇರೆಯವರಿಗೆ ಕೇಡು ಬಯಸುವ ಋಣಚಿಂತನೆ ನನಗೆ ಇನ್ನೂ ಬಂದಿಲ್ಲ. ಯಾಕೋ ಅದರಲ್ಲಿ ನನಗೆ ಬೇಕಾದ ಸ್ವಾರ್ಥ ಸುಖ ಇಲ್ಲ ಎಂದು ನನ್ನ ಭಾವನೆ. ಡಂಕುವಿನಂತೆ…..
ಡಂಕುವನ್ನು ನಿಮಗೆ ಗೊತ್ತಿರಬಹುದು.

ಒಬ್ಬ ರಾಜ ಯುದ್ದದಲ್ಲಿ ಗೆದ್ದು , ರಾಜ್ಯದ ಬೀದಿಯಲ್ಲಿ ಮೆರವಣಿಗೆ ಬರುತ್ತಿದ್ದ. ಪ್ರಜೆಗಳು ಖುಷಿಯಿಂದ ರಾಜನನ್ನು ಸ್ವಾಗತ ಮಾಡುತ್ತಿದ್ದರು. ದೂರದಲ್ಲಿ ಒಂದು ಅಂಗಡಿಯ ಛಾಯೆಯಲ್ಲಿ ಒಬ್ಬ ಕೈ ಕಾಲು ಇಲ್ಲದ ಮನುಷ್ಯ ನೆಲದಲ್ಲಿ ಖುಷಿಯಿಂದ ಹೊರಳಾಡುವುದನ್ನು ರಾಜ ವೀಕ್ಷಿಸಿದ. ” ಈ ಅಂಗವಿಕಲನೂ ನನ್ನ ವಿಜಯಕ್ಕೆ ಇಷ್ಟೊಂದು ಸಂತೋಷ ವ್ಯಕ್ತಪಡಿಸುತ್ತಿದ್ದಾನಲ್ಲಾ…. ಇವನಿಗೆ ಪಾರಿತೋಷಕ ಕೊಡಬೇಕು” ಎಂದು ರಾಜ ನಿರ್ಧರಿಸಿದ.

ಅಂದು ಯುದ್ದದಿಂದ ಬಂದು ಸುಸ್ತಾಗಿದುದ್ದರಿಂದ, ಮಾರನೇ ದಿನ ಸಂಜೆ, ಮಾರುವೇಷದಲ್ಲಿ ರಾಜ ಆ ಅಂಗಡಿಯ ಪಕ್ಕ ಬಂದು ಅಂಗಡಿ ಮಾಲೀಕನಲ್ಲಿ ಅಂಗವಿಕಲನ ಬಗ್ಗೆ ವಿಚಾರಿಸಿದಾಗ, ” ಅವನ ಹೆಸರು ಡಂಕು, ನನ್ನ ಅಂಗಡಿಯ ಈ ಛಾಯೆಯಲ್ಲಿ ಚಪ್ಪಲಿ ಹೊಲಿಯುವವ. ಇಂದು ಬಂದಿಲ್ಲ” ಎಂದು ಉತ್ತರಿಸುತ್ತಾನೆ. ಎರಡು ದಿನ ಬಿಟ್ಟು ಪುನಃ ರಾಜ ಮಾರುವೇಷದಲ್ಲಿ ಬೆಳಗ್ಗೆ ಹೋದಾಗ ಡಂಕು ಅಲ್ಲಿ ಇರುವುದಿಲ್ಲ. ಅವನ ಮನೆ ಹುಡುಕಿಕೊಂಡು ರಾಜ ತಲುಪುತ್ತಾನೆ. ಅಲ್ಲಿ ಅವನ ಮಡದಿಯಲ್ಲಿ ನೀರು ಕೇಳಿ ಕುಡಿಯುತ್ತಾ ಇರುವಾಗ, ಡಂಕು ತೆವಳಿಕೊಂಡು ನಗುನಗುತ್ತಾ ರಾಜನ ಮುಂದೆ ಬಂದು ಕೂರುತ್ತಾನೆ.

ತನ್ನ ಮುರಿದ ಚಪ್ಪಲಿ ಸರಿ ಮಾಡಿಸಲು ಕೊಡುತ್ತಾನೆ. ಡಂಕು ಬಾಯಿಯಿಂದ ಹೊಲಿಯುವ ವೇಗ ನೋಡಿ ರಾಜ ಚಕಿತನಾಗುತ್ತಾನೆ, ಅದಕ್ಕೆ ಎರಡು ಚಿನ್ನದ ನಾಣ್ಯ ಕೊಡುತ್ತಾನೆ. ಆದರೆ
ಡಂಕು ” ನನಗೆ ಕೂಲಿ- ಬರೇ ಕಾಲು ನಾಣ್ಯ ಚಿಲ್ಲರೆ , ಇಷ್ಟೊಂದು ದುಡ್ಡು ಬೇಡ”. ” ನಾನೊಬ್ಬ ವ್ಯಾಪಾರಿ, ನನ್ನಲ್ಲಿ ಚಿಲ್ಲರೆ ಇಲ್ಲ. ಆ ನಾಣ್ಯಕ್ಕೆ ಸರಿಯಾಗಿ ನನ್ನ ಈ ಕೈ‌ಚೀಲ, ಚಪ್ಪಲಿ ಟೋಪಿಯನ್ನು ಮರು ಹೊಲಿಗೆ ಮಾಡು” ಎನ್ನುತ್ತಾನೆ ರಾಜ.

ಸರಿ ಎಂದು ಡಂಕು ಎಲ್ಲಾ ಕೆಲಸ ಮಾಡಿ, ಒಂದು ಚಿನ್ನದ ನಾಣ್ಯ ಮರಳಿ ಕೊಟ್ಟು. “ಇಷ್ಟೇ ನನ್ನ ಕೂಲಿ” ಎಂದು ಮನೆಯ ಒಳಗೆ ಹೋಗಿ ಅಂದು ವಿಜಯೋತ್ಸವದ ದಿನದಂತೆ ಹೊರಳಾಡಿ ಖುಷಿಪಡುವುದು ನೋಡಿ ರಾಜ ಆಶ್ಚರ್ಯದಿಂದ ಕಾರಣ ಕೇಳಿದ.

ಅವನ ಮಡದಿ ” ಸ್ವಾಮೀ, ನನ್ನ ಗಂಡ ದಿನಕ್ಕೆ ಅರ್ಧ ನಾಣ್ಯದಷ್ಟೇ ದುಡಿಯುವುದು. ಅದಕ್ಕಿಂತ ಜಾಸ್ತಿ ಹಣ ದುಡಿದು ಸಿಕ್ಕರೆ ಈ ರೀತಿ ಖುಷಿ ವ್ಯಕ್ತಪಡಿಸುತ್ತಾರೆ. ಒಂದು ದಿನ ಖರ್ಚು ಮಾಡಿ ಮಿಕ್ಕಿದುದ್ದನ್ನು ಹುಂಡಿಯಲ್ಲಿ ಹಾಕುತ್ತಾರೆ. ಜಾಸ್ತಿ ಕೂಲಿ ಬಂದ ಮೇಲೆ , ಅದಕ್ಕನುಗುಣವಾಗಿ ಕೆಲಸದ ಕಡೆ ಹೋಗದೆ ಮನೆಯಲ್ಲಿ ನಮ್ಮ ಜೊತೆ ಸುಖವಾಗಿರು(rest ತೆಗೋ)ತ್ತಾರೆ. ನಂತರ ಪುನಃ ಕೆಲಸಕ್ಕೆ ಹೋಗುತ್ತಾರೆ.”

ರಾಜನ ಮನಸ್ಸು ಹೇಳಿತು ” ಒಬ್ಬ ಬಡವನಲ್ಲಿ ಬಡವ, ತನ್ನ ಎಷ್ಟೇ ಚಿಕ್ಕ ಗುರಿಯನ್ನು, ಯಾರಿಗೂ ಮೋಸ ಮಾಡದೆ, ತನಗಾಗಿ, ತನ್ನ ದುಡಿತದಿಂದ, ತನ್ನ ಚೌಕಟ್ಟಿನಲ್ಲಿ ಪಡೆದಾಗ ಅವನೂ ಒಬ್ಬ ವೀರ ವಿಜಯಿಯೇ ಆಗಿರುತ್ತಾನೆ”

ಡಂಕುವಿನಂತೆಯೇ……
ನನ್ನ ಬಗ್ಗೆ ಮಾತ್ರ
ಧನಾತ್ಮಕವಾಗಿ ಋಣಾತ್ಮಕವಾಗಿ ಚಿಂತಿಸಿ,
ಮನಸ್ಸನ್ನು ತಲ್ಲಣಗೊಳಿಸದೆ,
ದಿನಗಳೊಂದಿಗೆ ಜೊತೆ ಜೊತೆಯಲಿ
ಜೀವನ ಸಾಗಿಸುತ್ತಾ….

ನಿಮ್ಮವ ನಲ್ಲ

*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW