‘ಲೆಕ್ಕ ಪುಸ್ತಕ’ – ಮಂಜಯ್ಯ ದೇವರಮನಿ



ಬೆವರು ಅಪ್ಪನ ಅಂಗಿಯನ್ನು ತೊಯಿಸಿ ತೊಪ್ಪೆ ಮಾಡಿತ್ತು.ಅವನ ಕಷ್ಟ ನೋಡಲಾಗುತ್ತಿರಲಿಲ್ಲ.ಈಗಿನಂತೆ ವಾಹನಗಳಿರಲಿಲ್ಲ. ಅವ್ವ ಲೆಕ್ಕಪುಸ್ತಕ ನೋಡಿ ಕಣ್ಣೀರು ಹಾಕುತ್ತಿದ್ದಳು. ಒಂದು ದಿನ ಅಪ್ಪನಿಲ್ಲದಿದ್ದಾಗ ಲೆಕ್ಕ ಪುಸ್ತಕವನ್ನು ಬೆಂಕಿಗೆ ಹಾಕಿದಳು. ಲೇಖಕ ಮಂಜಯ್ಯ ದೇವರಮನಿ ಅವರು ಬರೆದ ಲೆಕ್ಕ ಪುಸ್ತಕ, ತಪ್ಪದೆ ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಕಡು ಬೇಸಿಗೆಯ ದಿನಗಳು. ನಾನು ಮೂರನೇಯ ತರಗತಿಯಲ್ಲಿ ಓದುತ್ತಿದ್ದೆ. ಸಂಗಾಪುರ ಮತ್ತು ಸುತ್ತಮುತ್ತಲಿನ ಸೀಮೆಯಲ್ಲಿ ಮಳೆ ಮಾಯವಾಗಿತ್ತು. ಮುಗಿಲನ್ನು ಎಷ್ಟೇ ಹುಡುಕಿದರು ಮಳೆಯ ಸಣ್ಣ ಕುರುಹು ಕಾಣುತ್ತಿರಲಿಲ್ಲ. ಆದರೂ ಮುಗಿಲು ನೋಡುವುದನ್ನು ಜನ ಬಿಟ್ಟಿರಲಿಲ್ಲ. ಹೊಲಮಾಳಗಳ ಬಿಕೋ ಎನ್ನುತ್ತಿದ್ದವು. ದನಕರುಗಳು ತಿಪ್ಪೆಯ ದಂಟನ್ನು ತಿಂದು ಜೀವ ಹಿಡಿದುಕೊಂಡಿದ್ದವು. ಕೆರೆಗಳು ಸತ್ತು ತುಂಬಾ ವರ್ಷಗಳೇ ಆಗಿದ್ದವು. ಎಲ್ಲಿ ನೋಡಿದರೂ ಜಾಲಿ ಮುಳ್ಳುಗಳದ್ದೆ ಸಾಮ್ರಾಜ್ಯ.

ಫೋಟೋ ಕೃಪೆ : google

ಬೀದಿಬದಿಯಲ್ಲಿ ನಿಮಿರಿ ನಿಂತು ಅಣಕಿಸುತ್ತಿದ್ದವು. ತಳ ಸೇರಿದ ಬಾವಿನೀರಿಗೆ ಜಗಳ ಕಾಯಬೇಕಾದ ಪ್ರಸಂಗ. ಯಾರ ಬಳಿಯೂ ನಯ ಪೈಸೆ ಇರಲಿಲ್ಲ. ಉಣ್ಣಲು ಪಡಿತರ ಅಂಗಡಿಯಲ್ಲಿ ಅಕ್ಕಿ ಮಾತ್ರ ಸಿಗುತ್ತಿತ್ತು. ಎಂದೋ ಬೆಳೆದ ಮೆಣಸಿನಕಾಯಿಗಳನ್ನು ಮನೆ ಮಹಡಿಯ ಮೇಲೆ ಒಣಗಿಸಿ ಜ್ವಾಪಾನ ಮಾಡಿಟ್ಟುಕೊಂಡಿದ್ದರು. ಒಣಕಾಯಿಯನ್ನು ದುಂಡಿಯಲ್ಲಿ ತಿರುವಿ ಕೆಂಪಿಂಡಿ ಮಾಡಿಕೊಳ್ಳುತ್ತಿದ್ದರು. ಜೋಳದ ನಿಟ್ಟುಗಳು ಕರಗಿದ್ದವು. ವಾಡೆಗಳಲ್ಲಿ ಸೆರಿ ಜೋಳ ಸಿಗುತ್ತಿರಲಿಲ್ಲ. ಹಗೇವುಗಳು ಬಾಯ್ದೆರೆದು ಯಾರನ್ನಾದರೂ ನುಂಗಲು ಕಾಯುವಂತೆ ಕುಳಿತ್ತಿದ್ದವು. ಜೋಳ ಕಾಣದೆ ಮೂರ್ನಾಕು ವರ್ಷವಾಗಿತ್ತು. ಭುವಣ್ಣ ಮನೆ ಮುಂದಿನ ಹಗೇವು ನೋಡಿ ಕಣ್ಣೀರು ತಂದು “ತಮ್ಮ ಮುಚ್ಚಿ ಬಿಡ್ರಲೆ… ಸಾಕು ಬಾಯಿ ತೆಗೆದು ಬಿಡಬ್ಯಾಡ್ರಿ ಹುಡ್ರು ಉಪ್ಪಡಿ ಬಿದ್ದಾವು ಮುದುಕ್ರು ಮುಂಡ್ರು ನುಂಗಿತು… ಮುಚ್ಚಿ ಬಿಡ್ರಿ” ಅಂತಾ ಬ್ಯಾಸರಿಸುತ್ತಿದ್ದ. ಊಟಕ್ಕೆ ಕೆಂಪಿಂಡಿ ಅನ್ನ ಅಷ್ಟೆ. ಅದನ್ನೇ ಕಲಿಸಿಕೊಂಡು ತಿನ್ನಬೇಕಿತ್ತು. ಕೆಲವೊಮ್ಮೆ ಕುತ್ತಿಗೆ ಹಿಡಿದು ನೆತ್ತಿಗೆ ಹತ್ತಿ ಕೆಮ್ಮು ಒತ್ತರಿಸಿ ಬರುತ್ತಿತ್ತು. ಒಣಕಾಯಿ ತುಂಬಾ ಕಾರ ಮೂಗು ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಆದರೂ ತಿನ್ನುವುದನ್ನು ಬಿಡುತ್ತಿರಲಿಲ್ಲ ಹೊಟ್ಟೆ ಕೇಳಬೇಕಲ್ಲ!

ದಿನದ ಕೂಳು ಹೊಂದಿಸಿಕೊಳ್ಳುವುದು ಹರ್ಮಗಾಲ. ಜನ ಆಸೆಗಳನ್ನು ಕಾಲನ ಕೈಗೆ ಮಾರಿಬಿಟ್ಟಿದ್ದರು. ಅಪ್ಪನ ಬಳಿ ಒಂದಿಷ್ಟು ದುಡ್ಡಿತ್ತು ಹೇಗೋ ಕಷ್ಟಕಾಲಕ್ಕೆ ಬೇಕಾಗಬಹುದು ಎಂದು ಬೆನ್ನೂರಿನ ಬ್ಯಾಂಕೊಂದರಲ್ಲಿ ಜಮೆ ಮಾಡಿದ್ದ.

ಫೋಟೋ ಕೃಪೆ : google

ಅಪ್ಪನಿಗೆ ಏನು ತಿಳಿಯಿತೋ ಗೊತ್ತಿಲ್ಲ! ಒಂದು ದಿನ ನನ್ನನ್ನು ಬೆನ್ನೂರಿಗೆ ಕರೆದುಕೊಂಡು ಹೋದ. ಬ್ಯಾಂಕಿನಲ್ಲಿರುವ ಎಲ್ಲಾ ದುಡ್ಡನ್ನು ಬಿಡಿಸಿಕೊಂಡ. ಅಂಗಡಿಗೆ ಬೇಕಾದ ಎಲ್ಲಾ ಸಾಮಾನುಗಳನ್ನು ಮಾರ್ಕೆಟ್ನಲ್ಲಿ ಖರೀದಿ ಮಾಡಿದ. ಬೆಲ್ಲ, ಬೇಳೆ, ಅಕ್ಕಿ ಉಪ್ಪು, ಸಕ್ಕರೆ ಇನ್ನು ಮುಂತಾದ ದಿನಸಿಗಳನ್ನು ಕಟ್ಟಿಸಿದ. ನನಗೆ ತಿನ್ನಲು ಬಾಳೆಹಣ್ಣು ಕೊಡಿಸಿದ. ರಾಮಣ್ಣನ ಅಂಗಡಿಯಲ್ಲಿ ಪೇಡೆ, ರಸಗುಲ್ಲ ಕೊಡಿಸಿದ. ಚಪ್ಪರಿಸಿಕೊಂಡು ತಿಂದೆ ತುಂಬಾ ದಿನಗಳಗಿದ್ದಾವು ಆ ರೀತಿ ತಿನ್ನದೆ. ಒಂದು ಲಾರಿಯನ್ನು ಗೊತ್ತುಮಾಡಿಕೊಂಡು ಬಂದ. ಕಿರಾಣಿಯನ್ನು ಹೊತ್ತು ಅಡಕಬೇಕಿತ್ತು. ಹೊತ್ತು ಹಾಕಿ ಹಾಕಿ ಅಪ್ಪ ತುಂಬಾ ದಣಿದಿದ್ದ. ಬೆವರು ಅಪ್ಪನ ಅಂಗಿಯನ್ನು ತೊಯಿಸಿ ತೊಪ್ಪೆ ಮಾಡಿತ್ತು. ಅವನ ಕಷ್ಟ ನೋಡಲಾಗುತ್ತಿರಲಿಲ್ಲ. ಈಗಿನಂತೆ ವಾಹನಗಳಿರಲಿಲ್ಲ. ಯಾರು ಪೇಟೆ ದಾರಿ ತುಳಿಯುತ್ತಿರಲಿಲ್ಲ ಅಂಜುತ್ತಿದ್ದರು. ಪೇಟೆಯೆಂದರೆ ಠಕ್ಕು, ಮೋಸ, ಗೊತ್ತುಗುರಿಯಿಲ್ಲದ್ದು ಎಂಬ ಭಾವ. ಎಲ್ಲರೂ ಹಳ್ಳಿಹಾದಿಯನ್ನೇ ಸವೇಸುತ್ತಿದ್ದರು. ನಮ್ಮ ಭಾಗದ ಊರುಗಳಿಗೆ ಓಡಾಡಲು ಕಿಳ್ಳಿ ಲಾರಿಯಿತ್ತು. ಅದನ್ನು ಕಾದು ಅಂಗಡಿ ಸಾಮಾನುಗಳನ್ನು ಅಡಕಬೇಕಿತ್ತು. ಅದು ಊರೊಳಗೆ ಬರುತ್ತಿರಲಿಲ್ಲ. ಕತ್ರಿಯಲ್ಲೇ (ಊರಿಂದ ಮೂರು ಕಿ. ಮಿ ದೂರದ ಅಡ್ಡರಸ್ತೆ) ಸಾಮಾನುಗಳನ್ನು ಬಿಸಾಕಿ ಹೋಗುತ್ತಿದ್ದರು. ಅಪ್ಪ ಅಣ್ಣ ಎಲ್ಲ ಸಾಮಾನುಗಳನ್ನು ಚಕ್ಕಡಿಗಾಡಿಯಲ್ಲಿ ಹಾಕಿಕೊಂಡು ಅಂಗಡಿಗೆ ತಂದು ಅಡಕುತ್ತಿದ್ದರು.

ಫೋಟೋ ಕೃಪೆ : google

ಕಿರಾಣಿ ಬಂದಿದ್ದು ಊರಲ್ಲಿ ದೊಡ್ಡ ಸುದ್ದಿಯಾಯಿತು. ಜನರು ಇನ್ನಾದರೂ ಹಸಿವಿನ ಕಂದು ಹರಿಯಬಹುದು ಎಂದುಕೊಂಡರು. ಆದರೆ ಉದ್ರಿ ಹೇಗೆ ಕೇಳುವುದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿತ್ತು. ಈಗಾಗಲೇ ಸಾಕಷ್ಟು ಉದ್ರಿ ಕಾಲು ಮುರಿದುಕೊಂಡು ಗುಡ್ಡದಂತೆ ಕೂತಿದೆ. ಕೇಳಿದರೆ ಜಗದಣ್ಣ ಕೊಡುತ್ತಾನಾ ? ಎಲ್ಲರೂ ಲೆಕ್ಕ ಪುಸ್ತಕಕ್ಕೆ ಹೆದರಿ ಸುಮ್ಮನಿದ್ದರು. ಮರುದಿನ ಅಪ್ಪ ಎಲ್ಲರನ್ನೂ ಕರೆದು ಕಿರಾಣಿ ತೂಗಿ ಕೊಡತೊಡಗಿದ. ‘ಮುಂದಿನ ವರ್ಷ ಬೆಳೆದು ಉದ್ರಿ ತಿರುಸುವಂತ್ರಿ ಈಗ ಹೊಯ್ಯಿರಿ ಮಾಡ್ಕೆಂದು ಉಣ್ರಿ’ ಎಂದ. ಅಂಗಡಿ ಮುಂದೆ ದೊಡ್ಡ ಸಾಲು ನಿಂತಿತು. ರಾತ್ರಿ ಎರಡು ಗಂಟೆವರೆಗೂ ದಿನಸಿ ತೂಗಿಕೊಟ್ಟ. ಅಂಗಡಿ ಖಾಲಿಯಾಯಿತು. ಅವ್ವ ಅಪ್ಪನನ್ನು ಬೈದಳು. ನಾನು ಮತ್ತು ಅಣ್ಣ ಸುಮ್ಮನೆ ಕೂತಿದ್ದೆವು. ಅಜ್ಜ”ತಮ್ಮ ಜಗದಾ… ಬರಗಾಲದಾಗ ಉದ್ರಿಕೊಟ್ಟು ಹುಚ್ಚುಮಂಗ್ಯಾ ಆಗ್ತೀಯಾ ನೋಡು, ನಿನ್ನ ತೆಲಿ ಸುದ್ದಿಲ್ಲ. ಹೆಂಡ್ರು ಮಕ್ಕಳಿಗೆ ಚಿಪ್ಪು ಕೊಟ್ಟು ಕುಂದ್ರುತಿ” ಎಂದು ಬೈದ. ಅಪ್ಪ ಸುಮ್ಮನೆ ಚೀಲ ಕೊಡವಿ ಸುತ್ತಿಡುತ್ತಿದ್ದ. ಅವ್ವ ಬಹಳ ದಿನಕ್ಕೆ ಗೋಧಿಹುಗ್ಗಿ ಮಾಡಿದ್ದಳು. ಅಪ್ಪ ಹೊಟ್ಟೆ ತುಂಬ ಉಂಡ. ನಾವು ನಿದ್ದೇಗಂಣ್ಣಿನಲ್ಲೆ ಉಂಡೆವು. ಅಜ್ಜ ಉಣ್ಣಲಿಲ್ಲ. ಅವ್ವ ಕಟ್ಟಿಗೆ ಮೂಲೆಯಲ್ಲಿ ಕುಳಿತು ಅಳುತ್ತಿದ್ದಳು. ನಾವು ಕೂತಲ್ಲೇ ಜೋಪಡಿಸತೊಡಗಿದೆವು.



ಊರು ಒಂದಿಷ್ಟು ದಿನ ನೂಕಿತು. ಶಾಲೆಗಳು ಆರಂಭವಾಗಿದ್ದವು. ಅಪ್ಪನ ಬಳಿಯು ದುಡ್ಡಿರಲಿಲ್ಲ. ಅಪ್ಪನ ಗಳಿಕೆಯಲ್ಲಾ ಲೆಕ್ಕಪುಸ್ತಕ ಸೇರಿತ್ತು. ನಮಗೆ ಪೆನ್ನು ಪುಸ್ತಕ ಕೊಡಿಸಲು ಅಪ್ಪನ ಬಳಿ ದುಡ್ಡಿರಲಿಲ್ಲ. ಅವ್ವ ಲೆಕ್ಕಪುಸ್ತಕ ನೋಡಿ ಕಣ್ಣೀರು ಹಾಕುತ್ತಿದ್ದಳು. ಒಂದು ದಿನ ಅಪ್ಪನಿಲ್ಲದಿದ್ದಾಗ ಲೆಕ್ಕ ಪುಸ್ತಕವನ್ನು ಬೆಂಕಿಗೆ ಹಾಕಿದಳು.

ಕೆಲವು ದಿನಗಳ ನಂತರ ಮಳೆ ಚೆನ್ನಾಗಿ ಸುರಿಯಿತು. ಪ್ರತಿದಿನ ಸಂಜೆ ಮಳೆ ಹೊಯ್ಯುತ್ತಿತ್ತು. ಅಬ್ಬಾ ಆದೆಂಥಾ ಮಳೆ!!! ಸತ್ತಂತಿದ್ದ ಕೆರೆ ಕೊಡಿಗಳು ಗರ್ಜಿಸು ತೊಡಗಿದವು. ಕೆರೆ ಕೊಡಿಗಳಿಗೆ ಜೀವ ಇಣುಕಿತು. ಊರಿನ ಎಲ್ಲರೂ ಬಿತ್ತಿದರು, ಚೆನ್ನಾಗಿ ಬೆಳೆದರು, ಪೈರಿನಂತೆ ನಗು ಉಕ್ಕೇರಿತು. ಖುಷಿಯ ಕಡಲ ಕಟ್ಟೆಯೊಡೆಯಿತು. ಹತ್ತಿ, ಬಿಳಿಜೋಳ, ಕಡಲೆ, ಶೇಂಗಾ ನಳ ನಳಿಸಿದವು. ಕಣಗಳು ತುಂಬಿ ತುಳುಕಿದವು. ಒಕ್ಕಲು ಕುಣಿಯಿತು, ನವಿಲು ಕುಣಿಯಿತು, ಜನರು ಹರ್ತಿ ಕಟ್ಟಿ ಕುಣಿದರು. ಅವ್ವ ಲೆಕ್ಕದ ಪುಸ್ತಕ ಸುಟ್ಟಿದ್ದು ಅಪ್ಪನಿಗೆ ಸಮಸ್ಯೆಯಾಗಲಿಲ್ಲ. ಅನ್ನದ ಋಣ ಇಟ್ಟುಕೊಳ್ಳಬಾರದು ಅಂತೇಳಿ ಅಪ್ಪನ ಅಂಗಡಿಗೆ ಒಂದಕ್ಕೆರಡರಂತೆ ತಂದು ಹಾಕಿದರು. ಅಪ್ಪ ಅದ್ಯಾವ ನಂಬಿಕೆಯ ಮೇಲೆ ಉದ್ರಿ ಕೊಟ್ಟಿದ್ದ ಎಂಬುದು ಅವ್ವನಿಗೆ ಮನವರಿಕೆಯಾಯಿತು. ಅಪ್ಪನ ಮುಖದಲ್ಲಿ ಹೊನ್ನಾರ್ಕಿ ಹೂವು ಅರಳಿತು.


  • ಮಂಜಯ್ಯ ದೇವರಮನಿ, (ವೃತ್ತಿಯಲ್ಲಿ ಸರಕಾರಿ ಶಾಲಾ ಶಿಕ್ಷಕ. “ಕರಿಜಾಲಿ ಮರ” ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ನೆಚ್ಚಿನ ಹವ್ಯಾಸಗಳು) ಸಂಗಾಪುರ.

3 2 votes
Article Rating

Leave a Reply

1 Comment
Inline Feedbacks
View all comments

[…] ಒಮ್ಮೆ ಇಲ್ಲವೇ ಎರಡು ಬಾರಿ ಆ #ಚಿತ್ರಮಂದಿರಕ್ಕೆ ಚಕ್ಕಡಿಗಾಡಿ ಕಟ್ಟಿಕೊಂಡು ಹೋಗಿ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW