ನಾ ಕಂಡಂತೆ ‘ಸು’ ಕಾದಂಬರಿ – ಶಾಲಿನಿ ಹೂಲಿ ಪ್ರದೀಪ್

ವಿಜ್ಞಾನಿ, ಕಾದಂಬರಿಕಾರ, ಲೇಖಕ ಡಾ.ಪ್ರಸನ್ನ ಸಂತೇಕಡೂರು ಅವರ ಸು ಕಾದಂಬರಿ ಕ್ಯಾನ್ಸರ್ ಕುರಿತಾಗಿದ್ದು, ವೈಜ್ಞಾನಿಕವಾಗಿ ಜನರ ಮುಂದೆ ತರುವಲ್ಲಿ ಈ ಪುಸ್ತಕ ಗೆದ್ದಿದೆ, ಎಲ್ಲರೂ ಇಷ್ಟಪಟ್ಟು, ಕುತೂಹಲದಿಂದ ಓದಬಹುದಾದ ಪುಸ್ತಕವಾಗಿದೆ – ಶಾಲಿನಿ ಹೂಲಿ ಪ್ರದೀಪ್, ಮುಂದೆ ಓದಿ ಸು…

ಕ್ಯಾನ್ಸರ್ ಆಸ್ಪತ್ರೆಯ ರಿಸೆಪ್ಶನ್ ಜಾಗದಲ್ಲಿದ್ದ ಖುರ್ಚಿಯಲ್ಲಿ ಕೂತಿದ್ದೀನಿ. ಕ್ಯಾನ್ಸರ್ ರೋಗಿಗಳ ನೆರಳು ನನ್ನ ಸುತ್ತ ಆವರಿಸಿದೆ. ಒಂದೊಂದು ರೋಗಿಯ ಒಂದೊಂದು ಕತೆ. ಅವರ ಕೂಗಾಟ, ನರಳುವಿಕೆ ಮನಸ್ಸನ್ನು ಕುಗ್ಗಿಸುತ್ತಿದೆ.  ಅದನ್ನು ಕಣ್ಣಾರೆ ನೋಡುತ್ತಾ ಕೂತವಳಿಗೆ ಬಾಯಲ್ಲಿ ಒಂದು ಗುಟುಕು ನೀರು ಇಳಿಯುತ್ತಿಲ್ಲ. ಅಲ್ಲಿಂದ ಎದ್ದು ಹೊರಕ್ಕೆ ನಡೆಯೋಣವೆಂದರೆ ನನ್ನ ಜೊತೆ ಬಂದ ಆಪ್ತರೊಬ್ಬರು ಡಾಕ್ಟರ್ ಬಳಿ ಹೋಗಿ ಕೂತಿದ್ದಾರೆ, ಅವರನ್ನು ಬಿಟ್ಟಿ ಹೋಗುವಂತಿಲ್ಲ. ಒಂದು ರೀತಿಯ ನರಕಯಾತನೆ ಶುರುವಾಗಿತ್ತು. ಮನಸ್ಸನ್ನು ಬೇರೆಡೆ ಹರಿಸಬೇಕೆಂದರೆ ನನಗೆ ಇದ್ದದ್ದು ಒಂದೇ ದಾರಿ ಅದು ಮೊಬೈಲ್. ನನ್ನ ಪಾಕೆಟ್ ಲ್ಲಿದ್ದ ಮೊಬೈಲ್ ತರೆದು ಕ್ಯಾನ್ಸರ್ ಕುರಿತು ಕೆಲವು ವಿಷಯಗಳನ್ನ ಹುಡುಕಲು ಶುರು ಮಾಡಿದೆ.

ಕನ್ನಡದಲ್ಲಿ ಸು ಕಾದಂಬರಿ

ಕ್ಯಾನ್ಸರ್ ಕಾಯಿಲೆ ಎಂದರೇನು ? ಈ ಕಾಯಿಲೆಗೆ ಸಾವೇ ಅಂತ್ಯವೇ ? ರೋಗಿಗಳು ಅನುಭವಿಸುವ ಕಷ್ಟಗಳೇನು? ಹೀಗೆ ಸುಮಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತು.  ಅದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲದಲ್ಲಿದ್ದಾಗ ಫೇಸ್ಬುಕ್ ನಲ್ಲಿ ಸಿಕ್ಕಿದ್ದು  ಡಾ.ಪ್ರಸನ್ನ ಸಂತೇಕಡೂರು ಅವರ  ‘ಸು’ ಕಾದಂಬರಿ. ಕಾದಂಬರಿ ಓದುವ ಮೊದಲು ಲೇಖಕರ ಬಗ್ಗೆ ತಿಳಿದು ಕೊಳ್ಳಬೇಕು ಎಂದು ಹೊರಟಾಗ ಪ್ರಸನ್ನ ಅವರ ಬಗ್ಗೆ ತಿಳಿದಿದ್ದು ಅವರೊಬ್ಬ ವಿಜ್ಞಾನಿಯಾಗಿದ್ದು, ಅದರಲ್ಲೂ ಕ್ಯಾನ್ಸರ್ ಕುರಿತು ಸಂಶೋಧನೆ ಮಾಡಿರುವುದು ತಿಳಿದು ಬಂತು. ಆಗ ನನ್ನ ಕುತೂಹಲಕ್ಕೆ ಇನ್ನಷ್ಟು ಪುಷ್ಠಿ ಸಿಕ್ಕಂತಾಯಿತು. ಅವರೊಂದಿಗೆ ಚರ್ಚೆಗೆ ಇಳಿದಿದಷ್ಟೇ ಅಲ್ಲ, ಅವರ ಸು ಕಾದಂಬರಿಯನ್ನು ತರೆಸಿಕೊಂಡೆ. ಪುಸ್ತಕ ಓದುವ ಮೊದಲೇ ಒಬ್ಬ ವಿಜ್ಞಾನಿಯಾಗಿ ಪ್ರಸನ್ನ ಅವರು ಕ್ಯಾನ್ಸರ್ ಕುರಿತು ಏನು ಹೇಳುತ್ತಾರೆ? ಅವರ ನಿರೂಪಣಾ ಶೈಲಿ ಹೇಗಿರಬಹುದು? ಎನ್ನುವ ಸಾಕಷ್ಟು ಕುತೂಹಲದ ಜೊತೆಗೆ ಕೆಲವಷ್ಟು ನಿರೀಕ್ಷೆಗಳನ್ನ ನನ್ನ ತಲೆಯಲ್ಲಿ ಇಟ್ಟುಕೊಂಡಿದ್ದೆ.

ಮೊದಲು ಕಾದಂಬರಿ ಎಂದಾಕ್ಷಣ ನನ್ನ ತಲೆಯಲ್ಲಿ ಬಂದದ್ದು ೨೦೦ ಅಥವಾ ೩೦೦ ಪುಟಗಳಷ್ಟು ದಪ್ಪದ ಪುಸ್ತಕ. ಆದರೆ ‘ಸು’ ನನ್ನ ಕೈ ಸೇರಿದಾಗ ಬೇರೆ ಕಾದಂಬರಿಯಂತೆ ಇದು ಎಳೆಯುವುದಿಲ್ಲ ಅಂತ ಖಾತ್ರಿಯಾಯಿತು. ಕೇವಲ ೮೦ ಪುಟದಷ್ಟಿರುವ ಈ ಕಾದಂಬರಿಗೆ ಡಾ.ಪ್ರಸನ್ನ ಸಂತೇಕಡೂರು ಅವರು ‘ಸು’ ಎನ್ನುವ ಏಕಾಕ್ಷರ ಶೀರ್ಷಿಕೆ ಏಕೆ ಇಟ್ಟರು ಎನ್ನುವ ಕುತೂಹಲದ ಮೂಲಕ ಪುಸ್ತಕ ಓದಲು ಶುರು ಮಾಡಿದೆ.

‘ಸು’ ಕಾದಂಬರಿಕಾರ ಡಾ.ಪ್ರಸನ್ನ ಸಂತೇಕಡೂರು

ಸು ಅಂದರೆ ಕಾದಂಬರಿಯಲ್ಲಿ ಬರುವ ಕಥಾನಾಯಕನ ಹೆಸರು. ಅವನ ಪೂರ್ಣ ಹೆಸರು ಝಾವ್ ಜೊಂಗ್ ಸು . ಮೂಲತಃ ಚೀನಾ ದೇಶದವನು. ಆದರೆ ಆಮೇಲೆ ಅವನು ನೆಲೆಕಂಡಿದ್ದು ಅಮೇರಿಕಾದಲ್ಲಿ , ಅವನು ಮಿಯಾನ್ ಎಂಬುವಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಅವಳನ್ನೇ ಮದುವೆ ಆಗುತ್ತಾನೆ. ಅವರಿಗೆ ಮುದ್ದಾದ ಗಂಡು ಮಗು ಜನಿಸುತ್ತದೆ. ಆ ಸಂತೋಷದಲ್ಲಿರುವಾಗಲೇ ಸು ಕುಟುಂಬಕ್ಕೆ ಭರಸಿಡಿಲು ಬೀಳುತ್ತದೆ. ಅದು ಮಿಯಾನ್ ಳಿಗೆ ಬಂದ ಗರ್ಭಕಂಠದ ಕ್ಯಾನ್ಸರ್ ಕಾಯಿಲೆ, ಮುಂದೆ ಆ ಮಾರಕ ರೋಗದಿಂದ ಸಾಯುತ್ತಾಳೆ, ಸ್ವಲ್ಪ ವರ್ಷಗಳ ನಂತರ ಆ ನೋವಿನಿಂದ ಹೊರಗೆ ಬಂದು ಮತ್ತೋರ್ವ ಚಲುವೆಯನ್ನು ಪ್ರೀತಿಸುತ್ತಾನೆ ಸು.  ಅನಂತರ ಪ್ರೀತಿಸಿದ ಪ್ರಿಯತಮೆಯು ಕೂಡಾ ದೊಡ್ಡ ಕರಳಿನ ಕ್ಯಾನ್ಸರ್ ಗೆ ಬಲಿಯಾಗುತ್ತಾಳೆ. ಹೀಗೆ ಕ್ಯಾನ್ಸರ್ ಕಾಯಿಲೆ ಅವನ ನಿದ್ದೆ, ನೆಮ್ಮದಿಯನ್ನು ಹಾಳು ಮಾಡಿ ಅವನನ್ನು ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಬರುವಂತೆ ಮಾಡುತ್ತದೆ. ಅಲ್ಲಿ ಅವನು ಹಗಲು ರಾತ್ರಿಯನ್ನು ಲೆಕ್ಕಿಸದೆ ಮೆದುಳಿನ ಕ್ಯಾನ್ಸರ್ ಕುರಿತು ವಂಶವಾಹಿನಿಯೊಂದನ್ನು ಕಂಡು ಹಿಡಿಯುತ್ತಾನೆ. ಅದರ ಹೆಸರೇ ಎಇಜಿ – ೧. ಅವನ ಈ ಮಹತ್ತರವಾದ ಸಂಶೋಧನೆಯಿಂದ ಹಣ, ಕೀರ್ತಿ ಎಲ್ಲವು ಸಿಗುತ್ತದೆ. ಆದರೆ ಈ ಕ್ಯಾನ್ಸರ್ ಎನ್ನುವ ಮಾರಕ ರೋಗ ಸು ವಿಜ್ಞಾನಿಯನ್ನು ಕೂಡಾ ಬಿಡುವುದಿಲ್ಲ. ಇದು ಸು ಕಾದಂಬರಿಯ ಮುಖ್ಯ ಕಥಾ ಹಂದರವಾಗಿದೆ.

ಕತೆಯ ಹೊರತಾಗಿ ಪ್ರಸನ್ನ ಅವರು ಕೆಲವಷ್ಟು ರೋಚಕ ವಿಷಯಗಳನ್ನ ಓದುಗರ ಮುಂದೆ ಇಟ್ಟಿದ್ದಾರೆ, ಅದರಲ್ಲಿ ಹೆನ್ರಿಯೆಟ್ಟಾ ಲ್ಯಾಕ್ಸ್ ಎನ್ನುವ ಮಹಿಳೆಯ ವಿಷಯವು ಕೂಡಾ ಒಂದು. ಆಕೆಯೊಬ್ಬ ಕ್ಯಾನ್ಸರ್ ರೋಗಿಯಾಗಿದ್ದು, ಅದೇ ರೋಗದಿಂದ ಮುಂದೆ ಸಾಯುತ್ತಾಳೆ. ಆದರೆ ಅವಳ ಜೀವಕೋಶಗಳು ಸಾಯದೆ ಇಂದಿಗೂ ಸಾವಿರಾರು ಪ್ರಯೋಗಾಲಯಗಳಲ್ಲಿ ಬೆಳೆಯುತ್ತಿರುವುದು ವಿಸ್ಮಯ ಸಂಗತಿ . ಹಾಗಾಗಿ ಕ್ಯಾನ್ಸರ್ ಕ್ಷೇತ್ರದಲ್ಲಿ ಅವಳನ್ನು ಸಾವಿಲ್ಲದವಳೆಂದು ಕರೆಯುತ್ತಾರೆ. ಅವಳ ಜೀವಕೋಶದ ಜೊತೆಗೆ ಸು ನಿಗಿರುವ ನಂಟು, ಟಿಬೆಟಿಯನ್ನರ ಸಂಸ್ಕೃತಿ, ಚೀನಾದ ಚರಿತ್ರೆ, ಕ್ಯಾನ್ಸರ್ ವ್ಯಾಧಿಯ ಬಗ್ಗೆ ಕುತೂಹಲ ಹುಟ್ಟಿಸುವ ವಿಷಯಗಳನ್ನು ಸು ನಲ್ಲಿ ಓದಬಹುದು.

This slideshow requires JavaScript.

ಕೆಲವೆಡೆ ಕ್ಯಾನ್ಸರ್ ರೋಗಿಗಳ ನೋವುಗಳ ಕುರಿತು ಸ್ವತಃ ರೋಗಿಗಳೇ ಲೇಖನಗಳನ್ನು ಬರೆದಿದ್ದು ಓದಿದ್ದೇವೆ. ಆದರೆ ಒಬ್ಬ ಕ್ಯಾನ್ಸರ್ ಕುರಿತು ಸಂಶೋಧನೆ ಮಾಡಿದ ವಿಜ್ಞಾನಿಯೋರ್ವ ಜನರಿಗೆ ವೈಜ್ಞಾನಿಕ ರೂಪದಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವಲ್ಲಿ ಸು ಕಾದಂಬರಿಯ ಲೇಖಕ ಪ್ರಸನ್ನ ಅವರು ಗೆದ್ದಿದ್ದಾರೆ. ಇನ್ನೊಂದು ಆಚ್ಚರಿಯ ಸಂಗತಿಯೆಂದರೆ ಟಿಬೆಟಿಯನ್ನರ ಶವಸಂಸ್ಕಾರದ ಸಂದರ್ಭದಲ್ಲಿ ಹೆಣದ ಬೆನ್ನಲ್ಲಿ ಏನೋ ಬರೆಯುವ ಮತ್ತು ಹೆಣದ ತೊಡೆಯಿಂದ ಮಾಂಸ ಕಿತ್ತು ಅಲ್ಲಿಯ ರಣಹದ್ದುಗಳಿಗೆ ಎಸೆದು, ತಲೆಗೆ ಸುತ್ತಿಗೆಯಿಂದ ಹೊಡೆಯುವ, ತದನಂತರ ದೇಹವನ್ನು ಸೀಳುವುದನ್ನು ಓದುವಾಗ ಮೈ ಜುಮ್ಮೆನ್ನಿಸುತ್ತದೆ. ಈ ಎಲ್ಲವನ್ನು ಪ್ರಸನ್ನವರು ಗಮನಿಸಿ ಓದುಗರ ಮುಂದಿಟ್ಟಿರುವುದು ಮೆಚ್ಚುವಂತ ವಿಷ್ಯ.

ಖ್ಯಾತ ಕತೆಗಾರರು, ವಿಮರ್ಶಕರು ಆದ ಎಸ್. ದಿವಾಕರ್ ಅವರು ಮುನ್ನುಡಿ ಬರೆಯುವುದಷ್ಟೇ ಅಲ್ಲ, ಸು ಕಾದಂಬರಿಯ ಮಿನಿ ಕತೆಯೇ ಮುನ್ನಡಿಯಲ್ಲಿ ಓದಬಹುದು.

ಕತೆಯಲ್ಲಿ ಬರುವ ಸು ಪಾತ್ರಧಾರಿ ಪ್ರಸನ್ನ ಅವರ ಸೀನಿಯರ್ ವಿಜ್ಞಾನಿ ಎಂದು ತಿಳಿದಾಗ ಕಾದಂಬರಿಗೆ ಜೀವ ಬಂದಂತೆ ಅನಿಸಿದ್ದು ನಿಜ. ಒಟ್ಟಿನಲ್ಲಿ ಕಾದಂಬರಿ ಕ್ಯಾನ್ಸರ್ ಕುರಿತು ವೈಜ್ಞಾನಿಕವಾಗಿ ಓದುಗರ ಮುಂದೆ ತರುವ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಯತ್ನ ಯಶಸ್ವಿಯಾಗಿದೆ.  ‘ಸು’ ಕಾದಂಬರಿ ಮಲಿಯಾಳಂ ಭಾಷೆಗೆ ಅನುವಾದ ಕೊಂಡಿದ್ದು ಹೆಮ್ಮೆಯ ಸಂಗತಿ.

ಈ ಕಾದಂಬರಿಯಿಂದ ಪ್ರಸನ್ನ ಅವರ ಮೇಲೆ ನನ್ನ ನಿರೀಕ್ಷೆಗಳು ಹೆಚ್ಚಾಗಿವೆ ಮತ್ತು ಇಂತಹ ಇನ್ನಷ್ಟು ವೈಜ್ಞಾನಿಕ ಕುರಿತಾದ ಕಾದಂಬರಿ, ಕತೆಗಳನ್ನ ಓದುವ ತವಕದಲ್ಲಿದ್ದೇನೆ ಎಂದು ಹೇಳುತ್ತಾ  ಈ ಕಾದಂಬರಿಯನ್ನು ಎಲ್ಲರೂ ತಪ್ಪದೆ ಓದಿ ಎಂದು ಹೇಳುತ್ತಾನೆ.


0 0 votes
Article Rating

Leave a Reply

1 Comment
Inline Feedbacks
View all comments

[…] ಕೈ ಹಿಡಿದು ಎಬ್ಬಿಸುತ್ತಾರೋ ಅದೇ ನಿಜವಾದ #ಪ್ರೀತಿ ಅದು ಅರ್ಥವಾಗುವುದು ಆಕೆಗೆ ತಡವಾಗಲಿಲ್ಲ. […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW